
ಹೈದರಾಬಾದ್: ಐಪಿಎಲ್ ಟೂರ್ನಿಯ ನಿನ್ನೆಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್ ಅಭಿಷೇಕ್ ಶರ್ಮಾ ಶತಕದ ಬಳಿಕ ಜೇಬಿಂದ ನೋಟ್ ತೆಗೆದು ಅದನ್ನು ಎಲ್ಲರಿಗೂ ತೋರಿಸಿ ಸಂಭ್ರಮಿಸಿದ್ದರು. ಆದರೆ ಇದೀಗ ಈ ನೋಟ್ ಸೆಲೆಬ್ರೇಷನ್ ನ ಗುಟ್ಟನ್ನು ಅವರದ್ದೇ ತಂಡದ ಆಟಗಾರ ರಟ್ಟು ಮಾಡಿದ್ದಾರೆ.
ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಅಸಾಧ್ಯವಾಗಿದ್ದ ಗುರಿಯನ್ನು ಹೈದರಾಬಾದ್ ಯಶಸ್ವಿಯಾಗಿ ಮುಟ್ಟಿತ್ತು.
ಹೈದಾರಾಬಾದ್ ಗೆಲುವಿನಲ್ಲಿ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 141 ರನ್ ಚಚ್ಚಿದರು.
ಅಭಿಷೇಕ್ ಶರ್ಮಾ ನೋಟ್ ಸೆಲೆಬ್ರೇಷನ್
ಇನ್ನು ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಶತಕ ಸಿಡಿಸುತ್ತಲೇ ತಮ್ಮ ಜೇಬಿನಿಂದ ಒಂದು ಪೇಪರ್ ತೆಗೆದು ಅದನ್ನು ಮೈದಾನದಲ್ಲಿ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆ ಪೇಪರ್ ನಲ್ಲಿ 'This one is for Orange Army' (ಇದು ಆರೆಂಜ್ ಆರ್ಮಿಗೆ ಅರ್ಪಣೆ)ಎಂದು ಬರೆದಿದ್ದ ಅಭಿಷೇಕ್ ಶರ್ಮಾ ಅದನ್ನು ತೋರಿಸಿ ಸಂಭ್ರಮಿಸಿದ್ದರು. ಈ ಸಂಭ್ರಮಾಚರಣೆ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಸಂಭ್ರಮದ ಹಿಂದಿನ ಗುಟ್ಟನ್ನು ಹೈದರಾಬಾದ್ ಆಟಗಾರ ರಟ್ಟು ಮಾಡಿದ್ದಾರೆ.
4 ಪಂದ್ಯಗಳಿಂದ ಜೇಬಿನಲ್ಲಿಟ್ಟುಕೊಂಡಿದ್ದ
ಇನ್ನು ಅಭಿಷೇಕ್ ಶರ್ಮಾ ನೋಟ್ ಸೆಲೆಬ್ರೇಷನ್ ಕುರಿತು ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಮಾತನಾಡಿದ್ದು, ಈ ಗುಟ್ಟನ್ನು ಕೇಳಿದ ಪ್ರೇಕ್ಷಕರು ಮತ್ತು ಅಭಿಮಾನಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಪಂದ್ಯದ ನಂತರ ಪ್ರಶಸ್ತಿ ಪ್ರದಾನ ವೇಳೆ ಮಾತನಾಡಿದ ಟ್ರಾವಿಸ್ ಹೆಡ್, 'ಆ ನೋಟ್ ಹೊಸದೇನಲ್ಲ.. ಸೀಸನ್ ಆರಂಭದಿಂದಲೂ ಆ ನೋಟು ಅಭಿಷೇಕ್ ಜೇಬಿನಲ್ಲೇತ್ತು. ಸದ್ಯ 6 ನೇ ಪಂದ್ಯದಲ್ಲಿ ಅದನ್ನು ಕೊನೆಗೂ ಹೊರತೆಗೆಯಲು ಅವನಿಗೆ ಅವಕಾಶ ಸಿಕ್ಕಿತು. ನೋಟು ಅಭಿಷೇಕ್ ಶರ್ಮಾ ಜೇಬಿನಲ್ಲಿ 6 ಪಂದ್ಯಗಳಿಂದ ಇದೆ, ಇಂದು ರಾತ್ರಿ ಅದು ಹೊರಬಂದಿದ್ದಕ್ಕೆ ಸಂತೋಷವಾಗಿದೆ" ಎಂದು ಟ್ರಾವಿಸ್ ಹೇಡ್ ಹೇಳಿದ್ದಾರೆ.
ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು
ಇನ್ನು ಟ್ರಾವಿಸ್ ಹೆಡ್ ಉತ್ತರ ಕೇಳಿ ಆಯೋಜಕರು ಮಾತ್ರವಲ್ಲ.. ಮೈದಾನದಲ್ಲಿದ್ದ ಪ್ರೇಕ್ಷಕರೂ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ.
Advertisement