
ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಗೆಲುವಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಎಂಎಸ್ ಧೋನಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭ್ಯವಾಗಿದ್ದು, ಇದರಿಂದಾಗಿ ತಾವೇ ಅಚ್ಚರಿಗೊಂಡಿದ್ದಾರೆ. ಧೋನಿ ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಸಿಎಸ್‌ಕೆ ಗೆಲುವಿನ ಹಾದಿಗೆ ಮರಳಲು ನೆರವಾದರು. ಈ ಮೂಲತ ಧೋನಿ ಐಪಿಎಲ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು.
ಆದಾಗ್ಯೂ, ಪ್ರಶಸ್ತಿಯನ್ನು ನನಗೆ ನೀಡುತ್ತಿರುವುದು ಅನಿರೀಕ್ಷಿತ ಮತ್ತು ಸಿಎಸ್‌ಕೆ ಸ್ಪಿನ್ನರ್ ನೂರ್ ಅಹ್ಮದ್ ಅವರಂತಹವರು ಅದ್ಭುತ ಪ್ರದರ್ಶನ ನೀಡಿದ್ದು, ಅವರು ಈ ಪ್ರಶಸ್ತಿಗೆ ಅರ್ಹರು ಎಂದು ಹೇಳಿದರು. 'ಇಂದು ನನಗೆ 'ಅವರು ನನಗೆ ಏಕೆ ಪ್ರಶಸ್ತಿ ನೀಡುತ್ತಿದ್ದಾರೆ? ಎಂದು ಅರ್ಥವಾಗುತ್ತಿಲ್ಲ. ನೂರ್ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು' ಎಂದು ಧೋನಿ ಪಂದ್ಯದ ನಂತರ ಹೇಳಿದರು.
ಸತತ ಸೋಲುಗಳಿಂದ ಕಂಗೆಟಿದ್ದ ಸಿಎಸ್‌ಕೆ ತಂಡವು ತನ್ನ ಎರಡನೇ ಪಂದ್ಯವನ್ನು ಗೆದ್ದು, ಐಪಿಎಲ್ 2025 ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
'ಪಂದ್ಯ ಗೆಲ್ಲುವುದು ಒಳ್ಳೆಯದು. ಈ ರೀತಿಯ ಟೂರ್ನಮೆಂಟ್ ಆಡುವಾಗ, ನೀವು ಪಂದ್ಯಗಳನ್ನು ಗೆಲ್ಲಲು ಬಯಸುತ್ತೀರಿ. ದುರದೃಷ್ಟವಶಾತ್ ಹಿಂದಿನ ಪಂದ್ಯಗಳಲ್ಲಿ ನಾವು ಸೋಲು ಕಂಡಿದ್ದೇವೆ. ಅದಕ್ಕೆ ಹಲವು ಕಾರಣಗಳಿರಬಹುದು. ನಮ್ಮ ಕಡೆ ಗೆಲುವು ಇರುವುದು ಒಳ್ಳೆಯದು. ಇಡೀ ತಂಡಕ್ಕೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ನಾವು ಸುಧಾರಿಸಲು ಬಯಸುವ ಕ್ಷೇತ್ರಗಳಲ್ಲಿ ಸುಧಾರಣೆ ತರಲು ನೆರವಾಗುತ್ತದೆ. ಕ್ರಿಕೆಟ್‌ನಲ್ಲಿ ಅಥವಾ ಕೆಲವೊಮ್ಮೆ ಜೀವನದಲ್ಲಿ ನೀವಂದುಕೊಂಡ ರೀತಿಯಲ್ಲಿ ಯಾವುದೇ ಕೆಲಸಗಳು ನಡೆಯದಿದ್ದಾಗ ಅಥವಾ ಅದೃಷ್ಟ ನಿಮ್ಮ ಕಡೆ ಇಲ್ಲದಿದ್ದಾಗ, ಸವಾಲುಗಳು ಅಗತ್ಯಕ್ಕಿಂತ ಹೆಚ್ಚು ಕಠಿಣವಾಗಬಹುದು' ಎಂದರು.
'ಪಂದ್ಯವು ಕಠಿಣವಾಗಿತ್ತು. ಪವರ್‌ಪ್ಲೇ ನೋಡಿದರೆ ನಿಮಗೆ ತಿಳಿಯುತ್ತದೆ. ನಾವು ಚೆಂಡಿನೊಂದಿಗೆ ಹೋರಾಡುತ್ತಿದ್ದೆವು. ಹೀಗಾಗಿ, ಬ್ಯಾಟಿಂಗ್ ಘಟಕವಾಗಿ ನಾವು ಬಯಸಿದ ಆರಂಭವನ್ನು ಪಡೆಯಲು ನಮಗೆ ಸಾಧ್ಯವಾಗಲಿಲ್ಲ' ಎಂದು ಹೇಳಿದರು.
ನಿಯಮಿತವಾಗಿ ವಿಕೆಟ್‌ಗಳ ಪತನವೂ ಆಗುತ್ತಿತ್ತು. ನಾವು ಅಗತ್ಯವಿಲ್ಲದ ವೇಳೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು. ಚೆನ್ನೈ ವಿಕೆಟ್ ಸ್ವಲ್ಪ ನಿಧಾನಗತಿಯಲ್ಲಿರುವುದು ಒಂದು ಕಾರಣವಾಗಿರಬಹುದು. ನಾವು ತವರಿನಿಂದ ಹೊರಗೆ ಆಡಿದಾಗ, ಬ್ಯಾಟಿಂಗ್ ಘಟಕವು ಸ್ವಲ್ಪ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಬಹುಶಃ ನಾವು ಉತ್ತಮ ವಿಕೆಟ್‌ಗಳ ಮೇಲೆ ಆಡಿದರೆ ಬ್ಯಾಟ್ಸ್‌ಮನ್‌ಗಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ನೀವು ಅಂಜುಬುರುಕ ಕ್ರಿಕೆಟ್ ಆಡಲು ಬಯಸುವುದಿಲ್ಲ' ಎಂದು ಧೋನಿ ತಿಳಿಸಿದರು.
'ನಾವು ಅನ್ಶುಲ್ ಮೇಲೆ ಹೆಚ್ಚು ಒತ್ತಡ ಹೇರುತ್ತಿದ್ದೆವು. ಅವರು ಮೊದಲ ಆರು ಓವರ್‌ಗಳಲ್ಲಿ ಎರಡು ಓವರ್‌ಗಳನ್ನು ಬೌಲಿಂಗ್ ಮಾಡುತ್ತಿದ್ದರು. ನಾವು ಬದಲಾವಣೆಗಳನ್ನು ಮಾಡಿದ್ದೇವೆ ಮತ್ತು ಇದು ಉತ್ತಮ ದಾಳಿಯಂತೆ ಕಾಣುತ್ತಿದೆ. ಬೌಲಿಂಗ್ ಘಟಕವಾಗಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಬ್ಯಾಟಿಂಗ್ ಘಟಕವಾಗಿ, ನಾವು ಇನ್ನಷ್ಟು ಉತ್ತಮವಾಗಬೇಕಿದೆ. ಉತ್ತಮ ಆರಂಭ ಪಡೆದರೆ, ಇನಿಂಗ್ಸ್ ಪೂರ್ತಿ ಚೆನ್ನಾಗಿ ಆಡಬಹುದು. ಅವರು ಇಂದು ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
'ಅವರು (ಶೇಕ್ ರಶೀದ್) ಕೆಲವು ವರ್ಷಗಳಿಂದ ನಮ್ಮೊಂದಿಗಿದ್ದಾರೆ. ಈ ವರ್ಷ ಅವರು ವೇಗಿಗಳು ಮತ್ತು ಸ್ಪಿನ್ನರ್‌ಗಳ ವಿರುದ್ಧ ನೆಟ್ಸ್‌ನಲ್ಲಿ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಕೇವಲ ಆರಂಭ. ಅವರು ನಿಜವಾದ ಹೊಡೆತಗಳೊಂದಿಗೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ' ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹೇಳಿದರು.
Advertisement