
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಉತ್ತಮ ಆರಂಭ ಪಡೆದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಕಡೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿದ್ದು, ಇದೀಗ ತಮ್ಮ ಗೆಲುವಿನ ಹಳಿಗೆ ಮರಳಲು ಸಿದ್ಧತೆಯಲ್ಲಿ ತೊಡಗಿದೆ. ಇಂದು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಎದುರಿಸುತ್ತಿರುವುದರಿಂದ ಕಳಪೆ ಫಾರ್ಮ್ ಹೊಂದಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಆಯ್ಕೆಯ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ.
ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಅವರು ನಾಯಕ ಶ್ರೇಯಸ್ ಅಯ್ಯರ್ ಮತ್ತು ತರಬೇತುದಾರರನ್ನು ಪ್ರಮುಖ ಪಂದ್ಯವಾಗಿರುವುದರಿಂದ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಹೊರಗಿಡುವಂತೆ ಒತ್ತಾಯಿಸಿದ್ದಾರೆ.
ಈ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ರನ್‌ಗಳು ಬಂದಿಲ್ಲ. ಬೌಲಿಂಗ್‌ನಲ್ಲಿ ಅವರು ಕೆಲವೊಮ್ಮೆ ಒಂದು ಅಥವಾ ಎರಡು ವಿಕೆಟ್‌ಗಳನ್ನು ಪಡೆದಿದ್ದರೂ, ಅಲ್ಲೂ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ, ಮ್ಯಾಕ್ಸ್‌ವೆಲ್ ಬದಲಿಗೆ ಆಯ್ಕೆ ಮಾಡಲು ಬೆಂಚ್‌ನಲ್ಲಿ ಉತ್ತಮ ಆಟಗಾರರಿದ್ದಾರೆ ಎಂದು ಡೌಲ್ ಹೇಳಿದ್ದಾರೆ.
'ಮ್ಯಾಕ್ಸ್‌ವೆಲ್ ತನ್ನ ರನ್ ಅನ್ನು ಕಳೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ಅವರು ಔಟ್ ಆಗುತ್ತಿರುವ ರೀತಿ, ಕೋಚ್ ಆಗಿ ನನ್ನನ್ನು ನಿರಾಶೆಗೊಳಿಸುತ್ತದೆ. ಅವರ ದೃಷ್ಟಿಕೋನದಿಂದಲೂ ಅದು ನಿರಾಶಾದಾಯಕ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಅವರ ಬದಲಿಗೆ ಒಮರ್‌ಜೈ ಅಥವಾ ಇಂಗ್ಲಿಸ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿಬಹುದು' ಎಂದು ಸೈಮನ್ ಡೌಲ್ ಮಂಗಳವಾರ ಪಂದ್ಯಕ್ಕೆ ಮೊದಲು ಹೇಳಿದರು.
ಗಾಯದ ಕಾರಣದಿಂದಾಗಿ ಈ ಆವೃತ್ತಿಯ ಉಳಿದ ಪಂದ್ಯಗಳಿಂದ ಕಿವೀಸ್ ವೇಗಿ ಲಾಕಿ ಫರ್ಗುಸನ್ ಹೊರಗುಳಿದಿದ್ದು, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಅವರು ಇರುವುದಿಲ್ಲ.
'ಲಾಕಿ ಫರ್ಗುಸನ್ ಇಲ್ಲದಿರುವುದು ತಂಡಕ್ಕೆ ದೊಡ್ಡ ನಷ್ಟವಾಗಿದೆ. ಕಳೆದ ಪಂದ್ಯದಲ್ಲಿ ಅವರು ಕೇವಲ ಎರಡು ಎಸೆತಗಳನ್ನು ಎಸೆದರು. ಅದು ಆ ರನ್ ಚೇಸ್‌ನಲ್ಲಿ ಸಾಕಷ್ಟು ದೊಡ್ಡ ವ್ಯತ್ಯಾಸವನ್ನುಂಟು ಮಾಡಿತು. ಈಗ ಅವರು ಹೊರಗಿದ್ದಾರೆ, ಅದು ಎಷ್ಟು ಸಮಯದವರೆಗೆ ಎಂಬುದರ ಬಗ್ಗೆ ತಿಳಿದಿಲ್ಲ. ಆದ್ದರಿಂದ, ವೇಗದ ಬೌಲಿಂಗ್ ಆಯ್ಕೆಗಳ ಮೇಲೆ ಇದು ಪರಿಣಾಮ ಬೀರುತ್ತದೆ' ಎಂದು ಹೇಳಿದರು.
Advertisement