IPL 2025: ಬೌಲರ್ ಕೇಳದಿದ್ದರೂ Ishan Kishan ಗೆ ಔಟ್ ಕೊಟ್ಟ ಅಂಪೈರ್; ಮ್ಯಾಚ್ ಫಿಕ್ಸಿಂಗ್ ವಿವಾದ! MCC ನಿಯಮವೇನು?

ಹೈದರಾಬಾದ್ ಇನಿಂಗ್ಸ್‌ನ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಕಿಶನ್‌ ಔಟಾದರು. ದೀಪಕ್‌ ಚಹರ್‌ ಎಸೆತವನ್ನು ಲೆಗ್‌ಸೈಡ್‌ನತ್ತ ಬಾರಿಸಲು ಮುಂದಾದರು. ಆದರೆ, ಅದು ಸಾಧ್ಯವಾಗಲಿಲ್ಲ.
Ishan Kishan Dismissal Row
ಇಶಾನ್ ಕಿಶನ್ ಔಟ್ ವಿವಾದ
Updated on

ಹೈದರಾಬಾದ್‌: ಹಾಲಿ ಐಪಿಎಲ್ ಟೂರ್ನಿಯಲ್ಲಿ ಪದೇ ಪದೇ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಇದೀಗ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಅಂಪೈರ್ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿಬಂದಿದೆ.

ಹೌದು.. ಮುಂಬೈ ಇಂಡಿಯನ್ಸ್‌ (ಎಂಐ) ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ತಂಡದ ಬ್ಯಾಟರ್‌ ಇಶಾನ್ ಕಿಶನ್‌ ಔಟಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಮ್ಯಾಚ್‌ ಫಿಕ್ಸಿಂಗ್‌ ಆರೋಪಗಳೂ ಕೇಳಿ ಬಂದಿವೆ.

ಹೈದರಾಬಾದ್ ಇನಿಂಗ್ಸ್‌ನ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಕಿಶನ್‌ ಔಟಾದರು. ದೀಪಕ್‌ ಚಹರ್‌ ಎಸೆತವನ್ನು ಲೆಗ್‌ಸೈಡ್‌ನತ್ತ ಬಾರಿಸಲು ಮುಂದಾದರು. ಆದರೆ, ಅದು ಸಾಧ್ಯವಾಗಲಿಲ್ಲ. ಚೆಂಡು ವಿಕೆಟ್‌ಕೀಪರ್‌ ರಿಯಾನ್ ರಿಕೆಲ್ಟನ್ ಕೈಸೇರಿತು. ಈ ವೇಳೆ ಯಾರೊಬ್ಬರೂ ಔಟ್‌ಗಾಗಿ ಮನವಿ ಮಾಡಲಿಲ್ಲ.

ಚಹರ್ ಮುಂದಿನ ಎಸೆತಕ್ಕಾಗಿ ಹೋಗುತ್ತಿದ್ದ ವೇಳೆ ಆನ್‌ ಫೀಲ್ಡ್‌ ಅಂಪೈರ್‌ ವಿನೋದ್‌ ಶೇಷನ್‌ ಗೊಂದಲದಲ್ಲಿಯೇ ಔಟ್‌ ನೀಡಲು ಮುಂದಾದರು. ಇದನ್ನು ಗಮನಿಸಿದ ಚಹರ್‌, ವಿಕೆಟ್‌ಕೀಪರ್‌ ಕಡೆಗೆ ನೋಡಿ ಔಟ್‌ ಮನವಿ ಮಾಡಿದರು. ಈ ಬೆಳವಣಿಗೆ ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಸೇರಿದಂತೆ ಉಳಿದವರನ್ನೂ ಅಚ್ಚರಿಗೊಳಿಸಿತು.

ಇಷ್ಟೆಲ್ಲ ಆದರೂ, ಕಿಶನ್‌ ಡಿಆರ್‌ಎಸ್‌ ತೆಗೆದುಕೊಳ್ಳಲಿಲ್ಲ. ನಗುತ್ತಲೇ ಪೆವಿಲಿಯನ್‌ ಕಡೆಗೆ ಹೊರಟರು. ಅವರನ್ನು, ಮುಂಬೈ ಆಟಗಾರರು 'ತಲೆ ನೇವರಿಸಿ' ಬೀಳ್ಕೊಟ್ಟರು. ಅಲ್ಟ್ರಾಎಡ್ಜ್‌ ಪರಿಶೀಲನೆ ವೇಳೆ ಚೆಂಡು ಬ್ಯಾಟ್‌ಗೆ ತಾಗದಿರುವುದು ಸ್ಪಷ್ಟವಾಗಿತ್ತು. ಅದು ನೇರಪ್ರಸಾರವೂ ಆಯಿತು. ಅಷ್ಟರಲ್ಲಿ ಕಿಶನ್‌ ಬೌಂಡರಿ ಗೆರೆ ದಾಟಿದ್ದರು.

Ishan Kishan Dismissal Row
IPL 2025: 'ವಧುವಿನ ಗೆಳತಿಯಾಗುವ ಬದಲು ತಾನೇ ವಧುವಾಗಲು RCB ಬಯಸಿದರೆ...': ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಹೇಳಿದ್ದೇನು?

ಮ್ಯಾಚ್ ಫಿಕ್ಸಿಂಗ್ ಆರೋಪ

ಇನ್ನು ಈ ಬೆಳವಣಿಗೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮುಂಬೈ ಇಂಡಿಯನ್ಸ್ ಪಂದ್ಯ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಆರೋಪಿಸಲಾಗುತ್ತಿದೆ. 'ಇಶಾನ್‌ ಕಿಶನ್‌ ವಿಚಿತ್ರ ರೀತಿಯಲ್ಲಿ ಔಟಾದರು. ಮುಂಬೈ ತಂಡದ ಯಾರೊಬ್ಬರೂ ಔಟ್‌ಗಾಗಿ ಮನವಿ ಮಾಡಲಿಲ್ಲ. ಇಶಾನ್‌ ಕಿಶನ್‌ ಕೂಡ ಡಿಆರ್‌ಎಸ್‌ ತೆಗೆದುಕೊಳ್ಳಲಿಲ್ಲ. ಆದರೂ, ಅಂಪೈರ್‌ ಔಟ್‌ ನೀಡಿದು. ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂಬುದು ಅಲ್ಟ್ರಾಎಡ್ಜ್‌ ಪರಿಶೀಲನೆ ವೇಳೆಯೂ ಸ್ಪಷ್ಟವಾಗಿತ್ತು. ಆದರೂ, ಔಟ್ ನೀಡಿದ್ದೇಕೆ? ಫಿಕ್ಸಿಂಗ್‌ ನಡೆದಿದೆಯೇ?' ಎಂದು ನೆಟ್ಟಿಗರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ 'ಇಂತಹ ಪ್ರಸಂಗವನ್ನು ಈ ಹಿಂದೆ ನೋಡಿರಲಿಲ್ಲ' ಎಂದಿರುವ ಕೆಲವರು, 'ಈ ಕುರಿತು ತನಿಖೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.

MCC ನಿಯಮವೇನು?

ಇನ್ನು ಅಂಪೈರ್ ವರ್ತನೆ ಅನುಮಾನಾಸ್ಪದ ಎಂದು ಕೆಲವರು ವಾದಿಸುತ್ತಿದ್ದರೂ ಈ ಕುರಿತು ಎಂಸಿಸಿ ಸ್ಪಷ್ಟ ನಿಯಮ ರೂಪಿಸಿದೆ. ಎಂಸಿಸಿಯ ನಿಯಮ 31.7ರ ಪ್ರಕಾರ, "ಬ್ಯಾಟರ್ ತಾನು ಔಟಾಗಿದ್ದೇನೆ ಎಂದು ತಿಳಿದು ಕ್ರೀಸ್ ಬಿಟ್ಟು ಹೋಗಿದ್ದರೆ ಆಗ ಆನ್ ಫೀಲ್ಡ್ ಅಂಪೈರ್ ಮಧ್ಯಪ್ರವೇಶಿಸಿ ಆತ ಔಟಾಗಿಲ್ಲ ಎಂದು ಭಾವಿಸಿದರೆ ಆ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಿ ಬ್ಯಾಟರ್ ನನ್ನು ಪುನಃ ವಾಪಸ್ ಕರೆಯಬಹುದು. ಒಂದು ವೇಳೆ ಅದು ಇನ್ನಿಂಗ್ಸ್‌ನ ಅಂತಿಮ ವಿಕೆಟ್ ಆಗಿಲ್ಲದಿದ್ದರೆ, ಮುಂದಿನ ಎಸೆತ ಬರುವ ಕ್ಷಣದವರೆಗೆ ಯಾವುದೇ ಸಮಯದಲ್ಲಿ ಬ್ಯಾಟರ್ ಅನ್ನು ಅಂಪೈರ್ ಗಳು ವಾಪಸ್ ಕರೆಯಬಹುದು. ಆ ಸಂದರ್ಭದಲ್ಲಿ ಅದು ಅಂಪೈರ್‌ಗಳು ಮೈದಾನದಿಂದ ಹೊರಡುವ ಕ್ಷಣದವರೆಗೆ ಇರಬೇಕು ಎಂದು ಎಂಸಿಸಿ ನಿಯಮ ಹೇಳುತ್ತದೆ.

ಬೌಲರ್ ಅಪೀಲ್ ಮಾಡದೇ ಔಟ್ ನೀಡುವಂತಿಲ್ಲ

ಮತ್ತೊಂದು ನಿಯಮದಲ್ಲಿ ಫೀಲ್ಡಿಂಗ್ ತಂಡದಿಂದ ಮನವಿ ಭಾರದೇ ಅಂಪೈರ್ ಬ್ಯಾಟ್ಸ್‌ಮನ್ ಅನ್ನು ಔಟ್ ಎಂದು ಘೋಷಿಸಲು ಸಾಧ್ಯವಿಲ್ಲ. ಕ್ರಿಕೆಟ್ ನಿಯಮಗಳು ಫೀಲ್ಡಿಂಗ್ ತಂಡವು ವಿಕೆಟ್‌ಗಾಗಿ ಮನವಿ ಮಾಡದ ಹೊರತು ಅಂಪೈರ್ ಬ್ಯಾಟ್ಸ್‌ಮನ್‌ಗೆ ಔಟ್ ನೀಡಬಾರದು ಎಂದು ಹೇಳುತ್ತದೆ. ಇದರರ್ಥ ಫೀಲ್ಡಿಂಗ್ ತಂಡವು ಬ್ಯಾಟ್ಸ್‌ಮನ್ ಅನ್ನು ಔಟ್ ಎಂದು ಘೋಷಿಸಲು ಮೌಖಿಕವಾಗಿ ಅಂಪೈರ್‌ನಿಂದ ನಿರ್ಧಾರವನ್ನು ಕೋರಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com