IPL 2025: 'ಬೌಲರ್‌ಗಳಿಂದಲೇ RCBಗೆ ಗೆಲುವು, ಇಲ್ಲದಿದ್ದರೆ...'; ಅಭಿಮಾನಿಗಳನ್ನು ಕೆರಳಿಸಿದ ಸಂಜಯ್ ಮಂಜ್ರೇಕರ್ ಹೇಳಿಕೆ

'ಆರ್‌ಸಿಬಿ ಕೊನೆಗೂ ಗೆಲುವಿನ ಸೂತ್ರವನ್ನು ಕಂಡುಕೊಂಡಿದೆ. ಇದು ತಂಡದಲ್ಲಿರುವ ಒಬ್ಬ ವ್ಯಕ್ತಿಯಿಂದ ಆಗಿದ್ದಲ್ಲ. ಬದಲಿಗೆ 7 ಗೆಲುವುಗಳು, ತಂಡದ 6 ವಿಭಿನ್ನ ಆಟಗಾರರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ!' ಎಂದು ಮಂಜ್ರೇಕರ್ ತಿಳಿಸಿದ್ದಾರೆ.
ಸಂಜಯ್ ಮಂಜ್ರೇಕರ್ - ವಿರಾಟ್ ಕೊಹ್ಲಿ
ಸಂಜಯ್ ಮಂಜ್ರೇಕರ್ - ವಿರಾಟ್ ಕೊಹ್ಲಿ
Updated on

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಆರು ವಿಕೆಟ್‌ಗಳ ಗೆಲುವು ಸಾಧಿಸುವುದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ವಿರಾಟ್ ಕೊಹ್ಲಿ ಅವರ ತಾಳ್ಮೆಯ ಆಟಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಕೊಹ್ಲಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದು, ಆಡಿರುವ 10 ಪಂದ್ಯಗಳಲ್ಲಿ 443 ರನ್ ಗಳಿಸಿದ್ದಾರೆ. ಆದಾಗ್ಯೂ, ತಂಡವು ಅಗ್ರ ಸ್ಥಾನಕ್ಕೇರುವಲ್ಲಿ ಫ್ರಾಂಚೈಸಿಯ ಬೌಲಿಂಗ್ ಘಟಕವು ಹೆಚ್ಚು ಪ್ರಮುಖ ಪಾತ್ರ ವಹಿಸಿದೆ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಜಾಶ್ ಹೇಜಲ್‌ವುಡ್ 2, ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ಡೆಲ್ಲಿ ನೀಡಿದ 163 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿ ತಾಳ್ಮೆಯ ಆಟವಾಡಿದರು. ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ ಅಜೇಯ 73 ರನ್‌ಗಳ ಮೂಲಕ ಉತ್ತಮ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು.

'ಆರ್‌ಸಿಬಿ ಕೊನೆಗೂ ಗೆಲುವಿನ ಸೂತ್ರವನ್ನು ಕಂಡುಕೊಂಡಿದೆ. ಇದು ತಂಡದಲ್ಲಿರುವ ಒಬ್ಬ ವ್ಯಕ್ತಿಯಿಂದ ಆಗಿದ್ದಲ್ಲ. ಬದಲಿಗೆ 7 ಗೆಲುವುಗಳು, ತಂಡದ 6 ವಿಭಿನ್ನ ಆಟಗಾರರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ!' ಎಂದು ಮಂಜ್ರೇಕರ್ ತಿಳಿಸಿದ್ದಾರೆ.

'ಆರ್‌ಸಿಬಿಯ 7 ಗೆಲುವುಗಳಲ್ಲಿ 4 ಗೆಲುವುಗಳು ಚೇಸಿಂಗ್‌ನಲ್ಲಿ ಬಂದಿವೆ. ಆಗ ತಂಡ ಚೇಸ್ ಮಾಡಿದ್ದು, 174, 175, 157 ಮತ್ತು 162 ಆಗಿದೆ. ಈ ಆವೃತ್ತಿಯಲ್ಲಿ ನಿಜವಾದ ವ್ಯತ್ಯಾಸವನ್ನುಂಟುಮಾಡಿದ್ದು ಅವರ ಬೌಲರ್‌ಗಳು!' ಎಂದು ಭಾನುವಾರ ಡಿಸಿ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ನಂತರ ಮಂಜ್ರೇಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಂಜ್ರೇಕರ್ ಅವರ ಈ ರೀತಿಯ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ರೀತಿಯ ಅಜೆಂಡಾವನ್ನು ಕೈಬಿಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಮಂಜ್ರೇಕರ್ ಅವರು ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ 150 ಕ್ಕಿಂತ ಕಡಿಮೆ ಇದ್ದ ಕಾರಣ ಅವರನ್ನು 'ಮುಖ್ಯವಾದ ಬ್ಯಾಟ್ಸ್‌ಮನ್‌ಗಳ' ಪಟ್ಟಿಯಿಂದ ಕೈಬಿಟ್ಟಿದ್ದರು.

ಸಂಜಯ್ ಮಂಜ್ರೇಕರ್ - ವಿರಾಟ್ ಕೊಹ್ಲಿ
IPL 2025: 'ಜನರು ಮರೆಯುತ್ತಿದ್ದಾರೆ...': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ನಂತರ 'ಚೇಸ್ ಮಾಸ್ಟರ್' ವಿರಾಟ್ ಕೊಹ್ಲಿ

ಡಿಸಿ ವಿರುದ್ಧದ ಪಂದ್ಯದ ನಂತರ, ಕೊಹ್ಲಿ ತಮ್ಮ ಟೀಕಾಕಾರರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. 'ನನ್ನ ಸಿಂಗಲ್ಸ್ ಮತ್ತು ಡಬಲ್ಸ್ ನಿಲ್ಲದಂತೆ ಮತ್ತು ಸಾಂದರ್ಭಿಕವಾಗಿ ಬೌಂಡರಿಗಳು ಬರುವಂತೆ ನೋಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ . ಇದರಿಂದಾಗಿ ಆಟವು ನಿಶ್ಚಲವಾಗುವುದಿಲ್ಲ. ಈ ವರ್ಷ ನೀವು ಕೇವಲ ಹೊಡೆಯುವುದನ್ನಷ್ಟೇ ಗಮನದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಪಿಚ್ ಪರಿಸ್ಥಿತಿಯನ್ನು ನಿರ್ಣಯಿಸಬೇಕು, ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಂತರ ಅದಕ್ಕೆ ಅನುಗುಣವಾಗಿ ಬ್ಯಾಟಿಂಗ್ ಯೋಜಿಸಬೇಕು. ಜನರು ಪಾರ್ಟನರ್‌ಶಿಪ್ ಮಹತ್ವವನ್ನು ಮರೆಯುತ್ತಿದ್ದಾರೆ. ಪಾರ್ಟನರ್‌ಶಿಪ್ ಮತ್ತು ವೃತ್ತಿಪರತೆಯ ಮೂಲಕ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸುವುದು ಈ ಪಂದ್ಯಾವಳಿಯಲ್ಲಿ ಮುನ್ನೆಲೆಗೆ ಬರುತ್ತಿದೆ. ಒಂದು ತಂಡವಾಗಿ ನಾವು ಬ್ಯಾಟಿಂಗ್ ವಿಚಾರದಲ್ಲಿ ಉತ್ತಮವಾದ ಯೋಜನೆಗಳನ್ನು ಮಾಡಿಕೊಂಡಿದ್ದೇವೆ ಮತ್ತು ಅದಕ್ಕಾಗಿಯೇ ನಾವು 10 ರಲ್ಲಿ 7 ಗೆಲುವುಗಳನ್ನು ಹೊಂದಿದ್ದೇವೆ' ಎಂದು ಪಂದ್ಯದ ನಂತರ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com