Asia Cup 2025: ತಂಡದಲ್ಲಿ ಶುಭಮನ್ ಗಿಲ್‌ಗೆ ಸ್ಥಾನ ಡೌಟ್; ಮೂರು ದಿಟ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ!
ಏಷ್ಯಾ ಕಪ್ 2025ಕ್ಕಾಗಿ ಭಾರತದ ತಂಡ ಘೋಷಣೆಯ ನಿರೀಕ್ಷೆಯ ಬೆನ್ನಲ್ಲೇ, ಕೆಲವು ದಿಟ್ಟ ಆಯ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಮಂಗಳವಾರ ಮುಂಬೈನಲ್ಲಿ ಸಭೆ ಸೇರಿ ಕಾಂಟಿನೆಂಟಲ್ ಪಂದ್ಯಾವಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತರಾಗಿದ್ದರೂ, ಭಾರತೀಯ ತಂಡದಲ್ಲಿ ಟಿ20ಐ ಸ್ವರೂಪಕ್ಕೆ ಹೆಚ್ಚು ಪೈಪೋಟಿಯಿದೆ.
ಕ್ರಿಕ್‌ಬಜ್ ವರದಿ ಪ್ರಕಾರ, ಸಭೆಯಲ್ಲಿ ಆಯ್ಕೆ ಸಮಿತಿಯು ಮೂರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ಟೆಸ್ಟ್ ನಾಯಕ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡುವುದಿಲ್ಲ ಎನ್ನಲಾಗಿದೆ.
ಶುಭಮನ್ ಗಿಲ್ ಕೈಬಿಡುವ ಸಾಧ್ಯತೆ
ಏಷ್ಯಾ ಕಪ್‌ಗಾಗಿ ಟಿ20ಐ ಪಟ್ಟಿಯಲ್ಲಿ ಶುಭಮನ್ ಗಿಲ್‌ಗೆ ಸ್ಥಾನವಿಲ್ಲ ಎನ್ನಲಾಗಿದೆ. ಆಯ್ಕೆ ಸಮಿತಿಯು ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಆರಂಭಿಕ ಜೋಡಿಯಾಗಿ ಪರಿಗಣಿಸಿದರೆ, ಯಶಸ್ವಿ ಜೈಸ್ವಾಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಆದಾಗ್ಯೂ, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್, ಗಿಲ್ ಅವರ ಆಯ್ಕೆಗೆ ಬಲವಾದ ಬೆಂಬಲ ನೀಡಿದರೆ ಪರಿಸ್ಥಿತಿ ಬದಲಾಗಬಹುದು. ಹಾಗಾದರೆ, ಜೈಸ್ವಾಲ್ ಅವಕಾಶ ಮಾಡಿಕೊಡಬೇಕಾಗುತ್ತದೆ.
ಮೊಹಮ್ಮದ್ ಸಿರಾಜ್‌ಗೆ ಸ್ಥಾನವಿಲ್ಲ
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರೂ, ಸಿರಾಜ್ ಅವರನ್ನು ಏಷ್ಯಾ ಕಪ್‌ಗೆ ಕೈಬಿಡುವ ಸಾಧ್ಯತೆಯಿದೆ. ಜಸ್ಪ್ರೀತ್ ಬುಮ್ರಾ ಅವರು ಏಷ್ಯಾ ಕಪ್‌ಗೆ ಆಯ್ಕೆಯಾಗುವ ಸಾಧ್ಯತೆ ಇರುವುದರಿಂದ, ಸಿರಾಜ್ ಅವರ ಆಯ್ಕೆ ಕಷ್ಟಕರವಾಗಿದೆ. ಆಯ್ಕೆ ಸಮಿತಿಯು ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಮೊಹಮ್ಮದ್ ಶಮಿ ಅವರನ್ನು ಸಹ ಆಯ್ಕೆಗೆ ಪರಿಗಣಿಸಿಲ್ಲ.
ಶ್ರೇಯಸ್ ಅಯ್ಯರ್ ಮತ್ತೆ ಹೊರಗುಳಿಯಬೇಕಾಗಬಹುದು
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ, ಶ್ರೇಯಸ್ ಅಯ್ಯರ್ ಮತ್ತೆ ಟಿ20ಐ ಆಯ್ಕೆಯಿಂದ ಹೊರಗುಳಿಯಬೇಕಾಗಬಹುದು. ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ಖಚಿತ ಆಯ್ಕೆಗಳಾಗಿದ್ದು, ಆಲ್‌ರೌಂಡರ್ ಸ್ಥಾನಕ್ಕಾಗಿ ಹಾರ್ದಿಕ್ ಪಾಂಡ್ಯ ಜೊತೆಗೆ ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಪೈಪೋಟಿ ನಡೆಸುತ್ತಿದ್ದಾರೆ.


