
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಮುಂಬರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸಾಧ್ಯವಾದಷ್ಟು ರೋಮಾಂಚಕವಾಗಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಆಡುವುದಕ್ಕೆ ಹಲವೆಡೆಯಿಂದ ವಿರೋಧ ವ್ಯಕ್ತವಾಗಿದ್ದು, ಈ ಸಂಬಂಧ ಪಾಕಿಸ್ತಾನವು ಇನ್ಮುಂದೆ ಮಾತುಕತೆಗಾಗಿ ಬೇಡಿಕೊಳ್ಳುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥರು ಹೇಳಿದ್ದಾರೆ.
ಭಾರತ ಸರ್ಕಾರ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈ ಚಾಚುತ್ತಿರುವಂತೆ ತೋರುತ್ತಿದೆ. ಆದರೆ, ನಖ್ವಿ ಅದನ್ನು ದೂರ ತಳ್ಳಲು ನಿರ್ಧರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಎರಡೂ ಕ್ರಿಕೆಟ್ ಮಂಡಳಿಗಳು ತಟಸ್ಥ ಸ್ಥಳಗಳಲ್ಲಿ ಆಡಲು ನಿರ್ಧರಿಸಿದ್ದವು. ಅದಕ್ಕಾಗಿಯೇ, ಏಷ್ಯಾ ಕಪ್‌ನ ಆತಿಥೇಯರಾಗಿದ್ದರೂ, ಭಾರತವು ದುಬೈನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತದ ಕ್ರೀಡಾ ಸಚಿವಾಲಯದ ಹೇಳಿಕೆ ಹಿನ್ನೆಲೆಯಲ್ಲಿ ನಖ್ವಿ ಈ ಹೇಳಿಕೆ ನೀಡಿದ್ದಾರೆ.
ಭಾರತ vs ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸುವ ಬಗ್ಗೆ ವಿರೋಧ ವ್ಯಕ್ತವಾದ ನಡುವೆಯೂ, ಸರ್ಕಾರವು ತಾವು ಈ ಹಿಂದೆ ಹೇಳಿದ್ದನ್ನು ಪುನರಾವರ್ತಿಸಿದೆ. ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರೀಡೆಗಳನ್ನು ಆಡುವುದಿಲ್ಲ. ಇದು 2013 ರಿಂದಲೂ ನಡೆಯುತ್ತಿದೆ. ಆದರೆ, ಬಹು-ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಆಡುವುದನ್ನು ಬೇಡ ಎನ್ನುವುದಿಲ್ಲ ಎಂದಿದೆ.
ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಸಿಬಿ ಅಧ್ಯಕ್ಷ ಮತ್ತು ಪಾಕಿಸ್ತಾನದ ಆಂತರಿಕ ಸಚಿವರಾಗಿರುವ ನಖ್ವಿ, ಬಿಸಿಸಿಐ ಒಂದು ಶಕ್ತಿಶಾಲಿ ಸಂಸ್ಥೆಯಾಗಿದ್ದರೂ, ಪಿಸಿಬಿ ಅವರ ಮುಂದೆ ಯಾವುದೇ ಕಾರಣಕ್ಕೂ ತಲೆಬಾಗುವುದಿಲ್ಲ ಎಂದರು.
'ಮಾತುಕತೆ ನಡೆದಾಗಲೆಲ್ಲಾ ಅದು ಭಾರತದೊಂದಿಗೆ ಸಮಾನ ನೆಲೆಯಲ್ಲಿ ನಡೆಯುತ್ತದೆ ಮತ್ತು ಇನ್ಮುಂದೆ ಮಾತುಕತೆಗಾಗಿ ಬೇಡಿಕೊಳ್ಳುವುದಿಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಆ ಸಮಯ ಕಳೆದುಹೋಗಿದೆ ಮತ್ತು ಏನಾಗುತ್ತದೆಯೋ ಅದು ಸಮಾನತೆಯ ಆಧಾರದ ಮೇಲೆ ಇರುತ್ತದೆ' ಎಂದು ನಖ್ವಿ ಲಾಹೋರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾಗಿ ಡಾನ್ ವರದಿ ಮಾಡಿದೆ.
ಭದ್ರತಾ ಕಾರಣಗಳಿಂದಾಗಿ, ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಭಾರತ ಪಾಕಿಸ್ತಾನದಲ್ಲಿ ಆಡಲು ಬಯಸಲಿಲ್ಲ. ಆಗ ಐಸಿಸಿ ಮತ್ತು ಬಿಸಿಸಿಐ ಜೊತೆ ಮಾತುಕತೆ ನಡೆಸಿದ ನಖ್ವಿ, ಭಾರತ ಪಾಕಿಸ್ತಾನಕ್ಕೆ ಬರಬೇಕೆಂದು ಒತ್ತಾಯಿಸುವ ಬದಲು, ರಾಜಿ ಮಾಡಿಕೊಂಡರು. ಒಪ್ಪಂದದ ಭಾಗವಾಗಿ, ಉಭಯ ದೇಶಗಳು ತಟಸ್ಥ ಸ್ಥಳದಲ್ಲಿ ಆಡಿದವು. ಪಿಸಿಬಿಗೆ ಭವಿಷ್ಯದಲ್ಲಿ ಐಸಿಸಿ ಮಹಿಳಾ ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ನೀಡುವುದಾಗಿ ಭರವಸೆ ನೀಡಲಾಯಿತು.
Advertisement