

ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. 2027ರ ವಿಶ್ವಕಪ್ ಆಡುವ ಗುರಿಯನ್ನು ಉಭಯ ಆಟಗಾರರು ಹೊಂದಿದ್ದು, ಅಲ್ಲಿಯವರೆಗೆ ಅವರು ಏಕದಿನ ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತದೆಯೇ ಎಂಬುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೊಹ್ಲಿ ವಯಸ್ಸು 37 ಮತ್ತು ರೋಹಿತ್ ಶರ್ಮಾ 38 ವರ್ಷವಾಗಿದ್ದು, ಮುಂದಿನ ವಿಶ್ವಕಪ್‌ನ ಮಾರ್ಗಸೂಚಿಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಗಂಭೀರವಾಗಿ ಪರಿಗಣಿಸಿದೆ.
ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ಭಾರತದ ಮಾಜಿ ಆಯ್ಕೆದಾರ ಕ್ರಿಸ್ ಶ್ರೀಕಾಂತ್ ಪ್ರತಿಕ್ರಿಯಿಸಿದ್ದಾರೆ. 'ರೋ-ಕೊ' ಜೋಡಿ ಅಗ್ರಸ್ಥಾನದಲ್ಲಿ ಇಲ್ಲದೆ 2027ರ ODI ವಿಶ್ವಕಪ್ ಗೆಲ್ಲುವುದು ಅಸಾಧ್ಯ ಎಂದಿದ್ದಾರೆ.
ವಿರಾಟ್ ಕೊಹ್ಲಿಯ ಅದ್ಭುತ 135 ಮತ್ತು ರೋಹಿತ್ ಅವರ 57 ರನ್ ಭಾರತವನ್ನು 349 ರನ್‌ಗಳಿಗೆ ಕೊಂಡೊಯ್ಯಲು ಸಹಾಯ ಮಾಡಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 17 ರನ್ ಅಂತರದ ಗೆಲುವು ಸಾಧಿಸಲು ನೆರವಾಯಿತು. ಹೀಗಾಗಿ, ಭಾರತ 1-0 ಅಂತರ ಸರಣಿ ಮುನ್ನಡೆ ಕಾಯ್ದುಕೊಂಡಿದೆ.
ಅವರ ಭವಿಷ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಶ್ರೀಕಾಂತ್, ಅವರಿಲ್ಲದೆಯೇ ಭಾರತವು ದಕ್ಷಿಣ ಆಫ್ರಿಕಾದಲ್ಲಿ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಕೊಹ್ಲಿ ಮತ್ತು ರೋಹಿತ್ ಬೇರೆ ಲೆವೆಲ್‌ನಲ್ಲಿ ಆಡುತ್ತಿದ್ದಾರೆ. ಇವರಿಬ್ಬರಿಲ್ಲದೆ, 2027ರ ವಿಶ್ವಕಪ್ ಯೋಜನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ. ನಿಮಗೆ ಒಂದು ತುದಿಯಲ್ಲಿ ರೋಹಿತ್ ಮತ್ತು ಇನ್ನೊಂದು ತುದಿಯಲ್ಲಿ ವಿರಾಟ್ ಅಗತ್ಯವಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿನ ಜೊತೆಯಾಟದ ಕುರಿತು ಮಾತನಾಡಿದ ಅವರು, 'ರೋಹಿತ್ ಮತ್ತು ಕೊಹ್ಲಿ 20 ಓವರ್‌ಗಳಿಗೆ ಬ್ಯಾಟ್ ಮಾಡಿದರೆ, ಎದುರಾಳಿ ತಂಡವು ಇಲ್ಲವಾಗುತ್ತದೆ. ಇಂದು, ಅದೇ ಆಯಿತು. ಅವರು ಅಕ್ಷರಶಃ ಬ್ಯಾಟ್ ಮಾಡಿದರು' ಎಂದರು.
ಒಂದೇ ಸ್ವರೂಪದ ಕ್ರಿಕೆಟ್‌ನಲ್ಲಿ ಆಡುತ್ತಿದ್ದರೂ, ಈ ಜೋಡಿಯ ಬದ್ಧತೆ ಮತ್ತು ಫಿಟ್ನೆಸ್ ಅದ್ಭುತವಾಗಿದ್ದು, ಈ ಬಗೆಗಿನ ಅನುಮಾನಗಳನ್ನು ಶಾಶ್ವತವಾಗಿ ಕೊನೆಗೊಳಿಸಬೇಕು. ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಒಂದೇ ಮಾದರಿಯಲ್ಲಿ ಆಡುವಾಗ ಈ ರೀತಿಯ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ, ಅವರು 2027ರ ವಿಶ್ವಕಪ್‌ಗೆ ತಮ್ಮ ಸ್ಥಾನಗಳನ್ನು ಖಚಿತ ಪಡಿಸಿಕೊಂಡಿದ್ದಾರೆ. ಅವರಿಲ್ಲದೆ ನಾವು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
Advertisement