

ವಿಶಾಖಪಟ್ಟಣ: 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.
ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಣಗದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 271 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 39.5 ಓವರ್ ನಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿ 9 ವಿಕೆಟ್ ಅಂತರದಲ್ಲಿ ಅಮೋಘ ಜಯಭೇರಿ ಭಾರಿಸಿತು. ಈ ಜಯದೊಂದಿಗೆ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ತನ್ನ ಕೈವಶ ಮಾಡಿಕೊಂಡಿದೆ.
ಭಾರತ ಭರ್ಜರಿ ಬ್ಯಾಟಿಂಗ್
ಇನ್ನು ದಕ್ಷಿಣ ಆಫ್ರಿಕಾ ನೀಡಿದ್ದ 271 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಭಾರತ ರೋಹಿತ್ ಶರ್ಮಾ (75), ಯಶಸ್ವಿ ಜೈಸ್ವಾಲ್ (116) ಮತ್ತು ವಿರಾಟ್ ಕೊಹ್ಸಿ (65) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.
ಭರ್ಜರಿ ಆರಂಭ
ಇನ್ನು ಸವಾಲಿನ ಗುರಿ ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕರಾದ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ರೋಹಿತ್ ಶರ್ಮಾ ಎಂದಿನಂತೆ ತಮ್ಮ ಹಿಟ್ ಮ್ಯಾನ್ ಆಟವಾಡಿ ಕೇವಲ 73 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 75 ರನ್ ಸಿಡಿಸಿ ಕೇಶವ್ ಮಹಾರಾಜ್ ಬೌಲಿಂಗ್ ನಲ್ಲಿ ಔಟಾದರು. ಮತ್ತೊಂದು ಬದಿಯಲ್ಲಿ ತಾಳ್ಮೆಯ ಆಟವಾಡುತ್ತಿದ್ದ ಯಶಸ್ವಿ ಜೈಸ್ವಾಲ್ 121 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 12 ಬೌಂಡರಿ ಸಹಿತ 116 ರನ್ ಸಿಡಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಜೈಸ್ವಾಲ್ ತಮ್ಮ ಚೊಚ್ಚಲ ಏಕದಿನ ಶತಕ ಸಿಡಿಸಿದರು.
ರೋಹಿತ್ ಔಟಾದ ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಮತ್ತೆ ಸ್ಫೋಟಕ ಬ್ಯಾಟಿಂಗ್ ಮಾಡಿ ಕೇವಲ 45 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 65 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು.
Advertisement