

ಮುಲ್ಲನ್‌ಪುರ: ಚಂಡೀಗಢದ ಮುಲ್ಲನ್‌ಪುರ ಮೈದಾನದಲ್ಲಿ ಗುರುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ, ಭಾರತವನ್ನು 51 ರನ್ ಗಳ ಅಂತರದಿಂದ ಸೋಲಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ಪರ ಡಿಕಾಕ್ 46 ಎಸೆತಗಳಲ್ಲಿ 7 ಸಿಕ್ಸರ್, ಐದು ಬೌಂಡರಿಗಳೊಂದಿಗೆ ಅಜೇಯ 90 ರನ್ ಗಳಿಸಿದಾಗ ಜೀತೇಶ್ ಶರ್ಮಾ ರನೌಟ್ ಮಾಡಿದರು. ಇದರಿಂದ ಶತಕದಿಂದ ವಂಚಿತರಾದರು.
ರೀಜಾ ಹೆಂಡ್ರಿಕ್ಸ್ 8, ಮಾರ್ಕ್ರಾಮ್ 29, ಬ್ರೆವೀಸ್ 14 ಹಾಗೂ ಫೆರೇರಾ 30 ಹಾಗೂ ಡೆವಿಡ್ ಮಿಲ್ಲರ್ 20 ರನ್ ಗಳಿಸುವುದರೊಂದಿಗೆ ದಕ್ಷಿಣ ಆಫ್ರಿಕಾ ನಿಗದಿತ ನಿಗದಿತ ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು.
ಅನಗತ್ಯ ದಾಖಲೆ ಬರೆದ ಅರ್ಷದೀಪ್: ಅನುಭವಿ ವೇಗಿ ಅರ್ಷದೀಪ್ ಸಿಂಗ್ ಅವರು ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ಅವರು ಬರೋಬ್ಬರಿ 7 ವೈಡ್ ಗಳನ್ನು ಎಸೆದರು. ಇದರೊಂದಿಗೆ ಈ ಮಾದರಿಯಲ್ಲಿ ಒಂದೇ ಓವರ್ ನಲ್ಲಿ ಅತಿ ಹೆಚ್ಚು ವೈಡ್ ಹಾಕಿದ ಅಟಗಾರ ಎನಿಸಿಕೊಂಡರು. ಅಲ್ಲದೇ ಓವರ್ ವೊಂದರಲ್ಲಿ ಅತಿ ಹೆಚ್ಚು 13 ಎಸೆತ ಹಾಕಿದ ಬೌಲರ್ ಎಂಬ ದಾಖಲೆಯನ್ನು ಅಪ್ಘಾನಿಸ್ತಾನದ ನವೀನ್ ಉಲ್ ಹಕ್ ಜೊತೆಗೆ ಹಂಚಿಕೊಂಡರು.
ದಕ್ಷಿಣ ಆಫ್ರಿಕಾ ನೀಡಿದ214 ರನ್‌ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 17 ರನ್ ಗಳಿಸಿದರೆ, ಶುಭ್ ಮನ್ ಗಿಲ್ ಶೂನ್ಯಕ್ಕೆ ಔಟಾದರು. ಬಳಿಕ ಆಕ್ಸರ್ ಪಟೇಲ್ 21, ನಾಯಕ ಸೂರ್ಯ ಕುಮಾರ್ ಯಾದವ್ ಕೇವಲ 5, ತಿಲಕ್ ವರ್ಮಾ 62, ಹಾರ್ದಿಕ್ ಪಾಂಡ್ಯ 20, ಜೀತೇಶ್ ಶರ್ಮಾ 27, ಶಿವಂ ದುಬೆ 1, ಹರ್ಷದೀಪ್ ಸಿಂಗ್ 4, ವರುಣ್ ಚಕ್ರವರ್ತಿ ಶೂನ್ಯಕ್ಕೆ ಔಟಾದರು. ಹೀಗಾಗಿ ಭಾರತ 19.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 162 ರನ್ ಗಳಿಸುವ ಮೂಲಕ ಸೋಲು ಕಂಡಿತು. ದಕ್ಷಿಣ ಆಫ್ರಿಕಾ ಪರ ಬಾರ್ಟ್ ಮನ್ 4 ವಿಕೆಟ್ ಪಡೆದರೆ, ಲುಂಗಿ ನಿಗ್ಡಿ, ಮಾರ್ಕೋ ಜಾನ್ಸನ್ ಹಾಗೂ ಸಿಪಾಮ್ಲಾ ತಲಾ ವಿಕೆಟ್ ಪಡೆದರು.
Advertisement