

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಗಾಗಿ ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಈ ಹರಾಜಿನಲ್ಲಿ ಬರೋಬ್ಬರಿ 369 ಆಟಗಾರರ ಹೆಸರು ಕಾಣಿಸಿಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಒಟ್ಟು 17 ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ಇದೀಗ 16.40 ಕೋಟಿ ರೂ.ನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿರುವ ಆರ್‌ಸಿಬಿ ಸ್ಟಾರ್ ಆಟಗಾರನನ್ನು ಖರೀದಿಸಿದೆ.
ಎರಡನೇ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಲ್ರೌಂಡರ್ನನ್ನು ಖರೀದಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ 7 ಕೋಟಿ ರೂ.ಗೆ ಖರೀದಿಸಿದೆ.
ಕಳೆದ ಸೀಸನ್ನಲ್ಲಿ ವೆಂಕಟೇಶ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿಯ ಹರಾಜಿನಲ್ಲಿ ಇದೇ ವೆಂಕಟೇಶ್ ಅಯ್ಯರ್ ಬರೊಬ್ಬರಿ 23.75 ಕೋಟಿ ರೂಗೆ ಕೋಲ್ಕತಾ ಪಾಲಾಗಿದ್ದರು.
ಜೇಕಬ್ ಡಫಿ ಕೂಡ ಆರ್ ಸಿಬಿ ಪಾಲು
ಅಂತೆಯೇ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಿವೀಸ್ ವೇಗಿ ಜಾಕೋಬ್ ಡಫಿ ಅವರನ್ನು ಕೂಡ ಆರ್‌ಸಿಬಿ 2 ಕೋಟಿ ರೂ.ಗೆ ಖರೀದಿ ಮಾಡಿದೆ.
ಆರ್‌ಸಿಬಿ ತಂಡಕ್ಕೆ ಈ ಬಾರಿ 8 ಆಟಗಾರರನ್ನು ಖರೀದಿಸಲು ಅವಕಾಶವಿದ್ದು, ಅದರಂತೆ ಇದೀಗ ಓರ್ವ ಆಟಗಾರನನ್ನು ಖರೀದಿಸಿದ್ದು, ಇನ್ನೂ 7 ಮಂದಿಯನ್ನು ಮಾಡಬಹುದು. ಏಕೆಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದು.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಳಿ ಇನ್ನೂ 16.40 ಕೋಟಿ ರೂ ಪಾಕೆಟ್ ಇದ್ದು, ಈ ಬಾರಿ ಹೆಚ್ಚುವರಿ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.
ಸರ್ಫರಾಜ್, ಪೃಥ್ವಿ ಶಾ ಅನ್ ಸೋಲ್ಡ್
ಇನ್ನು ಭಾರತದ ಉದಯೋನ್ಮುಖ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾರನ್ನು ಯಾವುದೇ ಫ್ರಾಂಚೈಸಿ ಖರೀದಿ ಮಾಡಿಲ್ಲ. ಹೀಗಾಗಿ ಈ ಇಬ್ಬರೂ ಆಟಗಾರರು 2ನೇ ಸುತ್ತಿನಲ್ಲೂ ಅನ್ ಸೋಲ್ಡ್ ಆಗಿ ಉಳಿದಿದ್ದಾರೆ.
Advertisement