

ಬೆಂಗಳೂರು: ಭಾರತದ ದೇಶೀಯ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಆರಂಭಲ್ಲೇ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿದ್ದು ಒಡಿಶಾದ ಉದಯೋನ್ಮುಖ ಆಟಗಾರ ಮೊದಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ.
ಹೌದು.. ಇಂದು ಬೆಂಗಳೂರಿನ ಆಲೂರಿನ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆದ ಒಡಿಶಾ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಓಡಿಶಾ ತಂಡದ ಆರಂಭಿಕ ಆಟಗಾರ ಸ್ವಸ್ತಿಕ್ ಸಮಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೇವಲ 169 ಎಸೆತಗಳಲ್ಲಿ 212 ರನ್ ಚಚ್ಚಿದ ಸ್ವಸ್ತಿಕ್ ಸಮಲ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಒಡಿಶಾ ನಿಗಧಿತ 50 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 345 ರನ್ ಕಲೆಹಾಕಿತು. ಒಡಿಶಾ ಪರ ಆರಂಭಿಕ ಆಟಗಾರ ಸ್ವಸ್ತಿಕ್ ಸಮಲ್ 169 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 21 ಬೌಂಡರಿಗಳ ನೆರವಿನಿಂದ 212 ರನ್ ಚಚ್ಚಿದದರು. ಅವರಿಗೆ ನಾಯಕ ಸಮಂತ್ರಯ್ (100 ರನ್) ಉತ್ತಮ ಸಾಥ್ ನೀಡಿದರು. ಈ ಜೋಡಿಯ ಬೃಹತ್ ಜೊತೆಯಾಟದ ನೆರವಿನಿಂದ ಒಡಿಶಾ 50 ಓವರ್ ನಲ್ಲಿ 345 ರನ್ ಕಲೆಹಾಕಿತು.
ಸ್ವಸ್ತಿಕ್ ಸಮಲ್ ದಾಖಲೆ
ಇದಕ್ಕೂ ಮೊದಲು ಓಡಿಶಾ ತಂಡದ ಆರಂಭಿಕ ಆಟಗಾರ ಸ್ವಸ್ತಿಕ್ ಸಮಲ್ ದ್ವಿಶತಕದ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾದರು. ಈ ಶತಕದೊಂದಿಗೆ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಓಡಿಶಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಸಂಜು ಸ್ಯಾಮ್ಸನ್ ದಾಖಲೆ ಸಮಬಲ
ಅಂತೆಯೇ ಈ ಮೊದಲು ಕೇರಳದ ಸಂಜು ಸ್ಯಾಮ್ಸನ್ ಅವರು ಗೋವಾ ವಿರುದ್ಧ ಗಳಿಸಿದ್ದ 212 ರನ್‌ಗಳ ದಾಖಲೆಯನ್ನು ಇವರು ಸರಿಗಟ್ಟಿದ್ದಾರೆ. ಇದು ವಿಜಯ್ ಹಜಾರೆ ಟ್ರೋಫಿ ಇತಿಹಾಸದ ಜಂಟಿ ನಾಲ್ಕನೇ ಅತಿ ಹೆಚ್ಚು ವೈಯಕ್ತಿಕ ಮೊತ್ತವಾಗಿದೆ.
ಬೃಹತ್ ರನ್ ಚೇಸ್ ಮಾಡಿ ಗೆದ್ದು ಬೀಗಿದ ಸೌರಾಷ್ಟ್ರ
ಇನ್ನು ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಸೌರಾಷ್ಟ್ರ 48.5 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿ 5 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತು. ಸೌರಾಷ್ಟ್ರ ಪರ ವಿಶ್ವರಾಜ್ ಜಡೇಜಾ (50) ಅರ್ಧಶತಕ ಕಲೆಹಾಕಿದರೆ, ಸಮ್ಮರ್ ಗಜ್ಜರ್ ಅಜೇಯ (132) ಶತಕ ಸಿಡಿಸಿದರು. ಚಿರಾಗ್ ಗನಿ 86 ರನ್ ಗಳಿಸಿದರೆ, ಪ್ರೇರಕ್ ಮಂಕಂಡ್ 47 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ದಾಖಲೆಯ ಜೊತೆಯಾಟ: ಈ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, ನಾಯಕ ಬಿಪ್ಲಬ್ ಸಾಮಂತರಾಯ್ (100 ರನ್) ಅವರೊಂದಿಗೆ ಸೇರಿ ನಾಲ್ಕನೇ ವಿಕೆಟ್‌ಗೆ 261 ರನ್‌ಗಳ ಬೃಹತ್ ಜೊತೆಯಾಟ ನೀಡಿದ್ದು ವಿಶೇಷವಾಗಿತ್ತು.
Advertisement