
ನವದೆಹಲಿ: ತುಂಬಾ ವರ್ಷಗಳ ಬಳಿಕ ರಣಜಿ ಕ್ರಿಕೆಟ್ ನಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸಿರುವ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಬಿದ್ದು ಬಿದ್ದು ನಕ್ಕಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಹೌದು.. ರೈಲ್ವೇಸ್ ಮತ್ತು ದೆಹಲಿ ತಂಡಗಳ ನಡುವೆ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಡೆಲ್ಲಿ ನಾಯಕ ಮಾಡಿದ ಎಡವಟ್ಟು ವಿರಾಟ್ ಕೊಹ್ಲಿ ಮೈದಾನದಲ್ಲೇ ಬಿದ್ದು ಬಿದ್ದು ನಗುವಂತೆ ಮಾಡಿದೆ.
ರೈಲ್ವೇಸ್ ಬ್ಯಾಟಿಂಗ್ ವೇಳೆ ಎದುರಾಳಿ ತಂಡದ ಬ್ಯಾಟರ್ ಭಾರಿಸಿದ ಶಾಟ್ ಗೆ ಸ್ಲಿಪ್ ನಲ್ಲಿ ನಿಂತಿದ್ದ ಡೆಲ್ಲಿ ನಾಯಕ ಆಯುಷ್ ಬಡೋನಿ ಹೆದರಿ ಮೇಲಕ್ಕೆ ಜಿಗಿಯುತ್ತಾರೆ. ಈ ವೇಳೆ ಶಾರ್ಟ್ ಕವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಾ ನಿಂತಿದ್ದ ವಿರಾಟ್ ಕೊಹ್ಲಿ ಇದನ್ನು ನೋಡಿ ಅಲ್ಲಿಯೇ ಬಿದ್ದು ಬಿದ್ದು ನಗುತ್ತಾರೆ. ಮೈದಾನದಲ್ಲಿದ್ದ ಬೇರೆ ಆಟಗಾರರಿಗೆ ಕೊಹ್ಲಿ ಏಕೆ ನಗುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಆಗ ಕೊಹ್ಲಿಯೇ ಆಯುಷ್ ಬಡೋನಿ ಮಾಡಿದ ಎಡವಟ್ಟನ್ನು ಹೇಳಿ ಮತ್ತೆ ನಗಾಡುತ್ತಾರೆ.
ಈ ವೇಳೆ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಡೆಲ್ಲಿ ನಾಯಕ ಆಯುಷ್ ಬಡೋನಿ ತಮ್ಮ ವರ್ತನೆಗೆ ಸಮಜಾಯಿಷಿ ನೀಡುತ್ತಾರೆ. ವಿರಾಟ್ ಕೊಹ್ಲಿಯ ಈ ಹಾಸ್ಯಾತ್ಮಕ ವರ್ತನೆ ಆ ಸಮಯದಲ್ಲಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೆಲುವಂತೆ ಮಾಡಿತು.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ಹಿಮಾಂಶು ಸಾಂಗ್ವಾನ್ ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೂ ಪಂದ್ಯದ ಮೇಲಿನ ಹಿಡಿತ ಬಿಡದ ಡೆಲ್ಲಿ ಇನ್ನಿಂಗ್ಸ್ ಮತ್ತು 19 ರನ್‌ಗಳ ಅದ್ಭುತ ಗೆಲುವು ಸಾಧಿಸಿತು.
Advertisement