
ಬೆಂಗಳೂರು: ಹಾಲಿ ರಣಜಿ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲಬೇಕು ಎಂಬ ಕರ್ನಾಟಕ ಕ್ರಿಕೆಟ್ ತಂಡದ ಕನಸು ನುಚ್ಚುನೂರಾಗಿದ್ದು, ಹಾಲಿ ನಡೆಯುತ್ತಿರುವ ಹರ್ಯಾಣ ವಿರುದ್ಧದ ಪಂದ್ಯ ಗೆದ್ದರೂ ಮಯಾಂಕ್ ಅಗರ್ವಾಲ್ ಪಡೆ ನಾಕೌಟ್ ಹಂತಕ್ಕೇರಲು ಸಾಧ್ಯವಿಲ್ಲ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 304 ರನ್‌ಗಳಿಗೆ ಆಲೌಟ್ ಆಗಿದೆ. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಹರಿಯಾಣ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 232 ರನ್ ಗಳಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿದ್ದ ಕರ್ನಾಟಕ, ಎರಡನೇ ದಿನ ಬೇಗನೆ ವಿಕೆಟ್ ಕಳೆದುಕೊಂಡಿತು. 101 ಓವರ್ ಗಳಲ್ಲಿ 304 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಹರ್ಯಾಣ ಉತ್ತಮ ಬ್ಯಾಟಿಂಗ್
ಮೊದಲ ಇನ್ನಿಂಗ್ಸ್ ಆರಂಭಿಸಿದ ಹರಿಯಾಣ ಕರ್ನಾಟಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದು ಉತ್ತಮ ಆರಂಭ ಪಡೆದುಕೊಂಡಿತು. ಲಕ್ಷ್ಯ ಸುಮನ್ ದಲಾಲ್ ಮತ್ತು ಅಂಕಿತ್ ಕುಮಾರ್ ಮೊದಲ ವಿಕೆಟ್‌ಗೆ 74 ರನ್ ಗಳಿಸಿದರು. ಲಕ್ಷ್ಯ ಸುಮನ್ 22 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಅಂಕಿತ್ ಕುಮಾರ್ ಮತ್ತು ಯುವರಾಜ್ ಸಿಂಗ್ ಮತ್ತೊಂದು ಉತ್ತಮ ಜೊತೆಯಾಟ ಆರಂಭಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 78 ರನ್ ಕಲೆಹಾಕಿತು. 33 ರನ್ ಗಳಿಸಿದ ಯುವರಾಜ್ ಸಿಂಗ್ ಔಟಾದರು. ಬಳಿಕ ಬಂದ ಹೆಚ್ ಜೆ ರಾಣಾ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಅಂಕಿತ್ ಕುಮಾರ್ ಶತಕ ಗಳಿಸುವ ಮೂಲಕ ಹರಿಯಾಣಕ್ಕೆ ಆಸರೆಯಾದರು 154 ಎಸೆತಗಳಲ್ಲಿ 19 ಬೌಂಡರಿ ಸಹಿತ 118 ರನ್ ಗಳಿಸಿದರು.
ರಣಜಿ ಟ್ರೋಫಿಯಿಂದ ಕರ್ನಾಟಕ ಔಟ್
ರಣಜಿ ಟ್ರೋಫಿಯ (Ranji Trophy) ಸಿ ಗುಂಪಿನಲ್ಲಿ ಹರಿಯಾಣ, ಕೇರಳ ಹಾಗೂ ಕರ್ನಾಟಕ ಕ್ವಾರ್ಟರ್ ಫೈನಲ್ (Quarter Final) ಅವಕಾಶಕ್ಕಾಗಿ ಪೈಪೋಟಿ ನಡೆಸಿದ್ದವು. ಆದರೆ ಕೇರಳ ಬಿಹಾರದ ವಿರುದ್ಧ ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕೇರಳ 8ರ ಘಟ್ಟದ ಪ್ರವೇಶ ಖಚಿತವಾಗುತ್ತಿದ್ದಂತೆ ಇತ್ತ ಕರ್ನಾಟಕ ತಂಡ ಕೊನೆಯ ಪಂದ್ಯದ ಮುಗಿಯುವುದರೊಳಗೆ ಕ್ವಾರ್ಟರ್ ಫೈನಲ್ ರೇಸ್ನಿಂದ ಹೊರಬಿದ್ದಿದೆ. ಕ್ವಾರ್ಟರ್ ಫೈನಲ್ ಗೆಲ್ಲಲು ಕರ್ನಾಟಕ ಈ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿತ್ತು. ಆದರೆ ಸದ್ಯ ಹರಿಯಾಣ ಕೂಡ ಉತ್ತಮ ಸ್ಥಿತಿಯಲ್ಲಿದ್ದು ಪಂದ್ಯದ ಫಲಿತಾಂಶ ಅತಂತ್ರವಾಗಿದೆ.
ಕರ್ನಾಟಕಕ್ಕೆ ಮುಳುವಾದ ಕೇರಳದ ಬೋನಸ್ ಅಂಕ
ಇನ್ನು ಬಿಹಾರ ವಿರುದ್ಧ ನಡೆದ ಕೊನೆಯ ಸುತ್ತಿನ ಪಂದ್ಯದಲ್ಲಿ ಕೇರಳ ಇನ್ನಿಂಗ್ಸ್ ಹಾಗೂ 169 ರನ್ಗಳ ಜಯ ಸಾಧಿಸಿತು. ಬೋನಸ್ ಸಹಿತ 7 ಅಂಕ ಪಡೆದು ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಇದೀಗ ಅಗ್ರಸ್ಥಾನ ಖಚಿತ ಪಡಿಸಿಕೊಳ್ಳಲು ಕರ್ನಾಟಕ ಹರಿಯಾಣ ಪಂದ್ಯದ ಫಲಿತಾಂಶವನ್ನು ಕಾಯುತ್ತಿದೆ. ಒಂದು ವೇಳೆ ಹರ್ಯಾಣ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡರೆ ಅಥವಾ ಗೆದ್ದರೆ ಅಗ್ರಸ್ಥಾನಕ್ಕೆ ಲಗ್ಗೆ ಇಡಲಿದೆ. ಈಗಾಗಲೇ 26 ಅಂಕ ಹೊಂದಿರುವ ಹರಿಯಾಣ ಈ ಪಂದ್ಯ ಸೋತರೂ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಸಿಲಿದೆ.
ಅಂದಹಾಗೆ 2016-17ರ ಋತುವಿನ ನಂತರ ಹರಿಯಾಣ ಇದೇ ಮೊದಲ ಬಾರಿಗೆ ನಾಕೌಟ್ ಸುತ್ತಿಗೆ ಪ್ರವೇಶಿಸಿದೆ.
Advertisement