
ಕಟಕ್: ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯಕ್ಕೆ ತಂಡ ಸೇರಿಕೊಂಡಿರುವ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೆ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿನ್ನೆ ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶತಕದ ಮೂಲಕ ಫಾರ್ಮ್ ಮರಳಿದ್ದು, ಇದೇ ಪಂದ್ಯದಲ್ಲಿ ಫಾರ್ಮ್ ಗೆ ಮರಳುವ ವಿರಾಟ್ ಕೊಹ್ಲಿ ಆಸೆಗೆ ಅಂಪೈರ್ ಗಳು ತಣ್ಮೀರೆರಚಿದ್ದಾರೆ. ನಿನ್ನೆ ಗಿಲ್ ಔಟಾದ ಬಳಿಕ ಕ್ರೀಸ್ ಗೆ ಆಗಮಿಸಿದ ವಿರಾಟ್ ಕೊಹ್ಸಿ ಕೇವಲ 5 ರನ್ ಗಳಿಸಿ ಔಟಾದರು. ಆ ಮೂಲಕ ಈ ಪಂದ್ಯದಲ್ಲಿ ಕೊಹ್ಲಿ ಫಾರ್ಮ್ ಗೆ ಮರಳುತ್ತಾರೆ ಎಂಬ ಅಭಿಮಾನಿಗಳ ಆಸೆಯೂ ಚೂರಾಯಿತು.
ಕೊಹ್ಲಿ ಮತ್ತೆ ಎಡವಟ್ಟು, ಅಂಪೈರ್ ತೀರ್ಪಿಗೆ ಅಚ್ಚರಿ
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್ ಸ್ಟಂಪ್ ಹೊರಗೆ ಹೋಗುವ ಚೆಂಡನ್ನು ಆಡಲು ಯತ್ನಿಸಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು. ಇನ್ನು ತಾವು ಔಟ್ ಆದ ರೀತಿಗೆ ಸ್ವತಃ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದು, ಅದಿಲ್ ರಷೀದ್ ಎಸೆದ ಎಸೆತವನ್ನು ಕೊಹ್ಲಿ ರಕ್ಷಣಾತ್ಮಕವಾಗಿ ಆಡುವ ಪ್ರಯತ್ನ ಮಾಡಿದರು.
ಈ ವೇಳೆ ಚೆಂಡು ಅವರ ಬ್ಯಾಟ್ ಅನ್ನು ವಂಚಿಸಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ವೇಳೆ ಇಂಗ್ಲೆಂಡ್ ಆಟಗಾರರು ಔಟ್ ಗೆ ಅಪೀಲ್ ಮಾಡಿದರು. ಆದರೆ ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ಹೀಗಾಗಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ರೀವ್ಯೂ ಕೇಳಿದರು. ಈ ವೇಳೆ 3ನೇ ಅಂಪೈರ್ ಸ್ನಿಕೋ ಮೀಟರ್ ಬಳಕೆ ಮಾಡಿ ಕೊಹ್ಲಿ ಔಟ್ ಎಂದು ತೀರ್ಪು ನೀಡಿದರು.
ಸ್ನಿಕೋ ಮೀಟರ್ ನಲ್ಲಿ ಚೆಂಡು ವಿರಾಟ್ ಕೊಹ್ಲಿ ಬ್ಯಾಟಿನ ಅಂಚಿಗೆ ಸವರಿ ಇಂಗ್ಲೆಂಡ್ ಕೀಪರ್ ಕೈ ಸೇರಿತ್ತು. ಹೀಗಾಗಿ 3ನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಈ ತೀರ್ಪಿಗೆ ಫೀಲ್ಜ್ ನಲ್ಲಿದ್ದ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದರು. ತಮ್ಮ ಬ್ಯಾಟ್ ಗೆ ಚೆಂಡು ತಗುಲಿದ ಅನುಭವವಾಗಿಲ್ಲ ಎನ್ನುವ ಹಾಗೆ ಕೊಹ್ಲಿ ಪ್ರತಿಕ್ರಿಯಿಸಿದರು. ಆದರೂ ಅಂಪೈರ್ ತೀರ್ಮಾನದಂತೆ ಮತ್ತೆ ನಿರಾಶೆಯಿಂದ ಪೆವಿಲಿಯನ್ ನತ್ತ ನಡೆದರು.
Advertisement