
ಗುರುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯದೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಅಭಿಯಾನವನ್ನು ಆರಂಭಿಸಿದೆ. ನಾಯಕ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ರೋಹಿತ್ ಶರ್ಮಾ ಔಟ್ ಆದ ಬಳಿಕ ಬ್ಯಾಟಿಂಗ್‌ಗೆ ಬಂದ ವಿರಾಟ್ ಕೊಹ್ಲಿ ಮತ್ತೊಮ್ಮೆ ಎಡವಿದರು. ಕೊಹ್ಲಿ ಮತ್ತು ರೋಹಿತ್ ಅವರ ಫಾರ್ಮ್ ಬಗ್ಗೆ ಈಗಾಗಲೇ ಟೀಕೆಗಳು ವ್ಯಕ್ತವಾಗುತ್ತಿವೆ. ರೋಹಿತ್ 36 ಎಸೆತಗಳಲ್ಲಿ 41 ರನ್ ಗಳಿಸಿದರೆ, ವಿರಾಟ್ 38 ಎಸೆತಗಳಲ್ಲಿ ಕೇವಲ 22 ರನ್ ಗಳಿಸಲಷ್ಟೇ ಶಕ್ತರಾದರು. ಇದೀಗ ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ, ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಸಂದೇಶ ಕಳುಹಿಸಿದ್ದಾರೆ.
ಅನುಭವಿ ಆಟಗಾರರಿಂದ ಹೊಸ ಪೀಳಿಗೆಯ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ವೇಳೆ 'ಕಠಿಣ ನಿರ್ಧಾರಗಳನ್ನು' ತೆಗೆದುಕೊಳ್ಳುವುದು ಕೋಚ್‌ನ ಜವಾಬ್ದಾರಿ ಎಂದು ಕುಂಬ್ಳೆ ಹೇಳಿದ್ದಾರೆ.
'ಹಿರಿಯ ಅಥವಾ ಅನುಭವಿ ಆಟಗಾರರನ್ನು ಹೊರಗಿಟ್ಟು, ಹಂತ ಹಂತವಾಗಿ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವಾಗ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಇದು ಇದು ಬಹಳ ಮುಖ್ಯವಾದ ಪಂದ್ಯಾವಳಿ ಎಂದು ನೀವು ಹೇಳಬಹುದು. ಆದರೆ, ಆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತರಬೇತುದಾರನ ಕೆಲಸ' ಎಂದು ಅವರು ESPNCricinfo ನಲ್ಲಿ ಹೇಳಿದ್ದಾರೆ.
'ಈ ಪಂದ್ಯಾವಳಿಯ ಫಲಿತಾಂಶಗಳು ಭಾರತ ತಂಡದ ಹಿರಿಯ ಆಟಗಾರರ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಗೆದ್ದರೂ, ಸೋತರೂ ತಂಡದಲ್ಲಿ ಸಂಭವನೀಯ ಬದಲಾವಣೆಗಳ ಬಗ್ಗೆ ನೀವು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿರುತ್ತದೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ವಿಶೇಷವಾಗಿ 2027ರ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಯೋಜಿಸುವ ಅಗತ್ಯವಿದೆ' ಎಂದು ಕುಂಬ್ಳೆ ಹೇಳಿದ್ದಾರೆ.
2027ರ ODI ವಿಶ್ವಕಪ್ ಪಂದ್ಯಾವಳಿಗೆ ಇನ್ನೂ ಸಮಯ ಇರುವಾಗ, ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಅಂತಿಮ ಪ್ರಮುಖ 50 ಓವರ್‌ಗಳ ಪಂದ್ಯಾವಳಿಯಾಗಿದೆ. ಹೀಗಾಗಿ, ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರ ಕೆಲವು ಆಟಗಾರರ ಭವಿಷ್ಯದ ಬಗ್ಗೆ ಚರ್ಚೆಗಳು ಪ್ರಾರಂಭವಾಗಬೇಕು. ಇದು 2027ರ ವಿಶ್ವಕಪ್‌ನತ್ತ ಸಾಗುವ ತಂಡದ ಭಾಗವಾಗಿರುವ ಆಟಗಾರರ ಬಗ್ಗೆ ಸ್ಪಷ್ಟತೆ ನೀಡುತ್ತದೆ ಎಂದು ಕುಂಬ್ಳೆ ಭಾವಿಸಿದ್ದಾರೆ.
'ಯಾವುದೇ ವಿಶ್ವಕಪ್ ತಂಡವು ಕನಿಷ್ಠ 20 ರಿಂದ 25 ಪಂದ್ಯಗಳಲ್ಲಿ ಒಟ್ಟಿಗೆ ಆಡಿದ ಆಟಗಾರರನ್ನು ಹೊಂದಿರಬೇಕು. ಇದು ಪರಸ್ಪರರ ಸಾಮರ್ಥ್ಯ ಮತ್ತು ಪಂದ್ಯದ ಸನ್ನಿವೇಶಗಳ ಸೂಕ್ಷ್ಮತೆಯನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಚಾಂಪಿಯನ್ಸ್ ಟ್ರೋಫಿಯ ನಂತರ, ಮುಂದಿನ ವಿಶ್ವಕಪ್‌ಗಾಗಿ ಯೋಜನೆ ರೂಪಿಸಬೇಕು. ಹಿರಿಯ ಆಟಗಾರರು ಮುಂದುವರಿಯಬೇಕೆ ಅಥವಾ ಕಿರಿಯ ಆಟಗಾರರಿಗೆ ತಂಡವನ್ನು ಮುನ್ನಡೆಸಲು ಅವಕಾಶವನ್ನು ನೀಡಬೇಕೇ ಎಂಬುದರ ಕುರಿತು ಕೋಚ್ ಆಗಿ ಗಂಭೀರ್ ಪರಿಹರಿಸಬೇಕಾದ ಕಠಿಣ ಪ್ರಶ್ನೆಗಳಿವು' ಎಂದು ಹೇಳಿದ್ದಾರೆ.
'ಅವರು ತಾಜಾ, ಯುವ ಆಟಗಾರರನ್ನು ಹೊಂದಿದ್ದಾರೆ. ಉತ್ತಮ ತಂಡವನ್ನು ಕಟ್ಟಲು ಸಾಕಷ್ಟು ಆಟಗಾರರನ್ನು ಹೊಂದಿದ್ದಾರೆ. ಆದ್ದರಿಂದ ಅವರು 2027ರ ವಿಶ್ವಕಪ್‌ಗೆ ಸಾವಯವವಾಗಿ ತಯಾರಿ ಪ್ರಾರಂಭಿಸಬೇಕಾಗಿದೆ. ಟಿ20ಗಳಲ್ಲಿ, ಅವರು ಉತ್ತಮ ಸಾಧನೆ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಉತ್ತಮ ನಾಯಕರಾಗಿದ್ದಾರೆ. ಮುಂದಿನ ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಬಾಕಿ ಇದ್ದು, ಹೊಸ ಆಟಗಾರರು ಪರಸ್ಪರ ಹೊಂದಾಣಿಕೆಯ ಆಟಗಳನ್ನು ಆಡುವ ಅಗತ್ಯವಿದೆ ಎಂದು ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ.
Advertisement