
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಶುಭ್ ಮನ್ ಗಿಲ್ ತಮ್ಮ ಈ ಪ್ರದರ್ಶನದ ಹಿಂದೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಅವರ ಅದೊಂದು ಸಂದೇಶ ನೆರವು ನೀಡಿತು ಎಂದು ಹೇಳಿದ್ದಾರೆ.
ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಶುಭ್ ಮನ್ ಗಿಲ್ 101 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡ ಬಳಿಕ ಭಾರತ ತಂಡ ಒತ್ತಡಕ್ಕೆ ಒಳಗಾಯಿತು.
ಈ ಹಂತದಲ್ಲಿ ಮತ್ತೊಂದು ಬದಿಯಲ್ಲಿದ್ದ ಶುಭ್ ಮನ್ ಗಿಲ್ ಕೂಡ ಒತ್ತಡದಲ್ಲಿದ್ದರು. ಆಗ ಡ್ರೆಸಿಂಗ್ ರೂಂ ನಿಂದ ನಾಯಕ ಕೊಹ್ಲಿ ಮತ್ತು ಕೋಚ್ ಗಂಭೀರ್ ಸಂದೇಶವೊಂದು ನೀಡಿದ್ದರು. ಈ ಸಂದೇಶವೇ ತನಗೆ ಶತಕ ಗಳಿಸಲು ನೆರವಾಯಿತು ಎಂದು ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹೇಳಿದರು.
ರನ್ ಗಳಿಸಲು ಕಷ್ಟವಾಗಿತ್ತು
ಬಾಂಗ್ಲಾದೇಶ ನೀಡಿದ್ದ 229 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಭಾರತ ತಂಡ ಉತ್ತಮ ಆರಂಭ ಪಡೆಯಿತಾದರೂ ಬಳಿಕ ಸತತ ವಿಕೆಟ್ ಗಳು ಪತನವಾಗುವುದರೊಂದಿಗೆ ತಂಡ ಒತ್ತಡಕ್ಕೆ ಸಿಲುಕಿತ್ತು. ನಿಧಾನಗತಿಯ ವಿಕೆಟ್‌ನಿಂದಾಗಿ ರನ್ ಗಳಿಸುವುದು ಕಷ್ಟಕರವಾಗಿತ್ತು. ಈ ಹಂತದಲ್ಲಿ ಟೀಮ್ ಇಂಡಿಯಾ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿತು. ತಂಡದ ಮೊತ್ತ 144 ರನ್ ಆಗುವಾಗ ರೋಹಿತ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಪೆವಿಲಿಯನ್‌ಗೆ ಮರಳಿದ್ದರು. ಇದರಿಂದಾಗಿ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿತು. ಆದಾಗ್ಯೂ, ಗಿಲ್ ಇನ್ನೂ ಕ್ರೀಸ್‌ನಲ್ಲಿದ್ದರು.
ಸಂದೇಶ ರವಾನಿಸಿದ ರೋಹಿತ್, ಗಂಭೀರ್
ಇದೇ ಸಂದರ್ಭದಲ್ಲಿ ಪೆವಿಲಿಯನ್ ನಲ್ಲಿ ಕುಳಿತಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್, ಕ್ರೀಸ್ ನಲ್ಲಿದ್ದ ಶುಭ್ ಮನ್ ಗಿಲ್ ಸಂದೇಶವೊಂದನ್ನು ರವಾನಿಸಿದ್ದರು. ಅದರಂತೆ ಗಿಲ್ ಕೊನೆಯವರೆಗೂ ಕ್ರೀಸ್ ನಲ್ಲೇ ಇರುವಂತೆ ನಾಯಕ ಮತ್ತು ಕೋಚ್ ಸೂಚಿಸಿದ್ದರು.
ಹೀಗಾಗಿ ಗಿಲ್ ಅಪಾಯಕಾರಿ ಹೊಡೆತಗಳಿಗೆ ಕೈ ಹಾಕದೇ ಕೇವಲ ಲೂಸ್ ಡೆಲಿವರಿಗಳನ್ನು ಮಾತ್ರ ದಂಡಿಸುತ್ತಾ ತಂಡವನ್ನು ಗೆಲುವಿನತ್ತ ಸಾಗಿಸಿದರು. ಅವರ ನೀಡಿದ ಈ ಸಲಹೆಯನ್ನು ಪಾಲಿಸಿದ್ದರಿಂದಾಗಿ ಶತಕ ಗಳಿಸುವುದು ಮತ್ತು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದು ಸಾಧ್ಯವಾಯಿತು ಎಂದು ಗಿಲ್ ಹೇಳಿದ್ದಾರೆ.
Advertisement