
ರಾವಲ್ಪಿಂಡಿ: ಭಾರೀ ಮಳೆಯಿಂದಾಗಿ ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚಾಂಪಿಯನ್ಸ್ ಟ್ರೋಫಿ 2025ರ ಗ್ರೂಪ್ ಬಿ ಪಂದ್ಯ ರದ್ದಾಗಿದೆ. ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ.
ಇನ್ನು ಪಂದ್ಯ ರದ್ದಾಗಿರುವುದರಿಂದ ಕೊನೆಯ ಸ್ಥಾನದಲ್ಲಿರುವ ಇಂಗ್ಲೆಂಡ್ ಅಥವಾ ಅಫ್ಘಾನಿಸ್ತಾನ ಪೈಕಿ ಒಂದು ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೆಚ್ಚಾಗಿದೆ. ಏಕೆಂದರೆ ಇಂಗ್ಲೆಂಡ್ ಮತ್ತು ಆಘ್ಘಾನ್ ನಡುವೆಯೇ ಒಂದು ಪಂದ್ಯ ಇದೆ. ಈಗಾಗಲೇ ಒಂದೊಂದು ಸೋತಿರುವ ಎರಡು ತಂಡಗಳು ತಮಗೆ ಉಳಿದ ಎರಡನ್ನೂ ಗೆಲ್ಲಬೇಕು. ಒಂದು ಸೋತರೂ ತಮ್ಮ ಸೆಮೀಸ್ ಹಾದಿ ಅಲ್ಲಿಗೆ ಮುಕ್ತಾಯಗೊಳ್ಳಲಿದೆ.
ನಾಳೆ ನಡೆಯಲಿರುವ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ನಾಕೌಟ್ ಆಗಿದ್ದು, ಸೋತವರು ಸ್ಪರ್ಧೆಯಿಂದ ಹೊರಬೀಳುತ್ತಾರೆ. ಗೆದ್ದವರು ಸೆಮಿಸ್‌ಗೆ ಪ್ರವೇಶಿಸಲು ತಮ್ಮ ಮುಂದಿನ ಎದುರಾಳಿಗಳನ್ನು ಸೋಲಿಸಬೇಕಾಗುತ್ತದೆ. ಇನ್ನು ಶುಕ್ರವಾರ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಮತ್ತು ಶನಿವಾರದಂದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಗಳಲ್ಲಿ ಒಂದನ್ನು ವರ್ಚುವಲ್ ಕ್ವಾರ್ಟರ್-ಫೈನಲ್ ಆಗಿರಬಹುದು. ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಲು ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 'ಎ' ಗುಂಪಿನಿಂದ ಸೆಮಿಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಈ ಗುಂಪಿನಲ್ಲಿರುವ ಆತಿಥೇಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
Advertisement