
ಚೆನ್ನೈ: ಏಕದಿನ ಕ್ರಿಕೆಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಜಾರಿಗೆ ತಂದಿರುವ ನಿಯಮವೊಂದರ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ಕೆಂಡಾಮಂಡಲರಾಗಿದ್ದಾರೆ.
ಹೌದು.. ಈಗಾಗಲೇ ಬ್ಯಾಟಿಂಗ್ ಸ್ನೇಹಿ ಪಿಚ್ ಗಳ ನಡುವೆ ಬೌಲರ್ ಗಳು ತಮ್ಮ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದರೆ ಅತ್ತ ಐಸಿಸಿ ಮಾತ್ರ ಪ್ರೇಕ್ಷಕರನ್ನು ಸೆಳೆಯಲು ಬ್ಯಾಟ್ಸ್ ಮನ್ ಸ್ನೇಹಿ ನಿಯಮಗಳನ್ನು ರೂಪಿಸುತ್ತಿದೆ ಎಂದು ಆರ್ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಸಿಸಿ ಏಕದಿನ ಕ್ರಿಕೆಟ್ ನಲ್ಲಿ ಭಾರತದ ಸ್ಪಿನ್ ಪ್ರಾಬಲ್ಯ ಕೊನೆಗಾಣಿಸಲೆಂದೇ ಕೆಟ್ಟ ನಿಯಮ ರೂಪಿಸುತ್ತಿದೆ ಎಂದು ಕೆಂಡ ಕಾರಿದ್ದಾರೆ.
ಇಷ್ಟಕ್ಕೂ ಯಾವುದು ಆ ನಿಯಮ?
ಐಸಿಸಿ ಇನ್ನಿಂಗ್ಸ್ ನಲ್ಲಿ ಎರಡು ಹೊಸ ಚೆಂಡಿನ ಬಳಕೆ ಮತ್ತು ಸರ್ಕಲ್ ಒಳಗೆ ಐವರು ಫೀಲ್ಡರ್ ಗಳು ಇರಲೇಬೇಕು ಎಂಬ ನಿಯಮ ತಂದಿರುವುದು ಅಶ್ವಿನ್ ಅಸಮಾಧಾನಕ್ಕೆ ಕಾರಣವಾಗಿದೆ. ಐಸಿಸಿಯ ಈ ನಿಯಮ ಮಧ್ಯಂತರ ಓವರ್ ಗಳಲ್ಲಿ ಭಾರತೀಯ ಸ್ಪಿನ್ನರ್ ಗಳ ಪ್ರಾಬಲ್ಯವನ್ನು ಮುರಿಯಬೇಕು ಎಂಬ ಉದ್ದೇಶಕ್ಕಾಗಿಯೇ ಮಾಡಿರುವ ನಿಯಮವಾಗಿದೆ ಎಂದು ಅಶ್ವಿನ್ ಆರೋಪಿಸಿದ್ದಾರೆ.
ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ
ಅಷ್ಟು ಮಾತ್ರವಲ್ಲದೆ ಏಕದಿನ ಕ್ರಿಕೆಟ್ ನ ಭವಿಷ್ಯದ ಬಗ್ಗೆಯೂ ಅಶ್ವಿನ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, 'ಇದು ನಿಜಕ್ಕೂ ಏಕದಿನ ಕ್ರಿಕೆಟ್ ಹೌದೇ' ಎಂದು ಪ್ರಶ್ನಿಸಿದ್ದಾರೆ.
'ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೂ ಮೊದಲು ಏಕದಿನ ಕ್ರಿಕೆಟ್ ಗೆ ಭವಿಷ್ಯ ಇದೆಯೇ? ಎಂದು ನಾನು ಅಚ್ಚರಿಗೊಂಡಿದ್ದೆ. ಟಿ20 ಪಂದ್ಯಗಳು ಕೇವಲ 4 ಗಂಟೆಗಳೊಳಗಾಗಿ ಮುಗಿಯುವುದರಿಂದ ತುಂಬಾ ಜನಸಂದಣಿ ಇರುತ್ತದೆ. ಅಫ್ಘಾನಿಸ್ತಾನದಂತಹ ತಂಡಗಳ ಪ್ರಥಮ ದರ್ಜೆ ರಚನೆ ಸುಧಾರಿಸಿದ ಬಳಿಕ ಟೆಸ್ಟ್ ಕ್ರಿಕೆಟ್ ಗೂ ಹೆಚ್ಚು ಅನುಕೂಲವಾಗುತ್ತದೆ ಎಂದು ನಾನು ಭಾವಿಸುತ್ತೇನೆ.
ಆದರೆ ಏಕದಿನ ಪಂದ್ಯಗಳ ವಿಚಾರಕ್ಕೆ ಬಂದಾಗ ಮಾತ್ರ ಹಾಗಲ್ಲ. 2013-14ರವರೆಗೂ ಏಕದಿನ ಕ್ರಿಕೆಟ್ ಅನ್ನು ಕೇವಲ ಒಂದು ಚೆಂಡಿನಲ್ಲಿ ಆಡಲಾಗುತ್ತಿತ್ತು. 2015ರಲ್ಲಿ ಹೊಸ ನಿಯಮ ಪರಿಚಯಿಸಲಾಯಿತು. ಅದರ ಪ್ರಕಾರ ಸರ್ಕಲ್ ನೊಳಗೆ ಐವರು ಫೀಲ್ಡರ್ ಗಳು ಕಡ್ಡಾಯ ಎಂದಾಯಿತು. ಜೊತೆಗೆ 2 ಚೆಂಡುಗಳೊಂದಿಗೆ ಆಡುವ ನಿಯಮ ತರಲಾಯಿತು. ಇದು ಭಾರತದ ಸ್ಪಿನ್ ಪ್ರಾಬಲ್ಯವನ್ನು ಮುರಿಯಲೆಂದೇ ಮಾಡಿರುವ ನಿಯಮ ಎಂಬುದು ನನ್ನ ಭಾವನೆಯಾಗಿದೆ' ಎಂದು ಅಶ್ವಿನ್ ಹೇಳಿದ್ದಾರೆ.
ರಿವರ್ಸ್-ಸ್ವಿಂಗ್ ಸಮೀಕರಣ
ಇದೇ ವೇಳೆ ಎರಡು ಹೊಸ ಚೆಂಡುಗಳ ನಿಯಮವು ಏಕದಿನ ಪಂದ್ಯಗಳಿಂದ ರಿವರ್ಸ್-ಸ್ವಿಂಗ್ ಸಮೀಕರಣವನ್ನು ಹೇಗೆ ತೆಗೆದುಹಾಕಿದೆ ಎಂಬುದನ್ನು ಅಶ್ವಿನ್ ಎತ್ತಿ ತೋರಿಸಿದರು. ಏಕದಿನ ಕ್ರಿಕೆಟ್ ನ ಭವಿಷ್ಯದ ಬಗ್ಗೆ ಐಸಿಸಿ ನಿರ್ಧಾರ ತೆಗೆದುಕೊಳ್ಳುವ ಹತ್ತಿರದಲ್ಲಿದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
"ರಿವರ್ಸ್ ಸ್ವಿಂಗ್ ಈಗ ಆಟದಿಂದ ಹೋಗಿರುವುದರಿಂದ ಅದು ಆಟದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ನಾನು ಭಾವಿಸುತ್ತೇನೆ. ಫಿಂಗರ್ ಸ್ಪಿನ್ ನ ಪಾತ್ರವನ್ನೂ ಕಡಿಮೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ (2027) ಐಸಿಸಿಗೆ ನಿಜವಾದ ಸವಾಲಾಗಲಿದೆ. ಆಟವು ತುಂಬಾ ನಿಧಾನವಾಗಿ ನಡೆಯುತ್ತಿರುವುದರಿಂದ ನಿರ್ಧಾರ ತೆಗೆದುಕೊಳ್ಳುವ ಅಂಚಿನಲ್ಲಿ ಐಸಿಸಿ ಇದೆ.
ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ: ಇಂದಿನ ಕಾಲದಲ್ಲಿ 50 ಓವರ್ ಗಳ ಕ್ರಿಕೆಟ್ ಗೆ ಪ್ರಾಮುಖ್ಯತೆ ಇದೆಯೇ? ಈ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ಪಂದ್ಯದವರೆಗೆ, ಈ ಚಾಂಪಿಯನ್ಸ್ ಟ್ರೋಫಿ ತುಂಬಾ ಏಕತಾನತೆಯಿಂದ ಕೂಡಿತ್ತು. ಒಂದು ಕಾಲದಲ್ಲಿ ಕೆಂಪು ಚೆಂಡಿನೊಂದಿಗೆ ಏಕದಿನ ಕ್ರಿಕೆಟ್ ಆಡಲಾಗುತ್ತಿತ್ತು. ಆಟದ ಈ ನಿರ್ದಿಷ್ಟ ಸ್ವರೂಪದ ಬಗ್ಗೆ ಗಂಭೀರವಾಗಿ ಯೋಚಿಸುವ ಸಮಯ ಇದು" ಎಂದು ಅಶ್ವಿನ್ ಹೇಳಿದ್ದಾರೆ.
ವರ್ಷಕ್ಕೆ ಕೇವಲ 33 ಏಕದಿನ ಪಂದ್ಯ
ಇನ್ನು ಐಸಿಸಿ ಏಕದಿನ ಕ್ರಿಕೆಟ್ ಗೆ ಎಷ್ಟು ಮಹತ್ವ ನೀಡುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಹಾಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳು 2025ರಲ್ಲಿ ಕೇವಲ 33 ಏಕದಿನ ಪಂದ್ಯಗಳಿಗೆ ಮಾತ್ರ ವೇಳಾಪಟ್ಟಿ ತಯಾರಿಸಲಾಗಿದೆ. ಇದು ಐಸಿಸಿ ಏಕದಿನ ಪಂದ್ಯಗಳಿಗೆ ನೀಡುತ್ತಿರುವ ಮಹತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಲಾಗಿದೆ.
Advertisement