
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸಂದರ್ಭದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಫಿಟ್ ಆಗದ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು. ಇದಾದ ಒಂದು ತಿಂಗಳ ನಂತರ ಬುಮ್ರಾ ಅಭ್ಯಾಸ ಆರಂಭಿಸಿದ್ದು, ಅಭಿಮಾನಿಗಳು ಇದೀಗ ವಿಶೇಷ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಬುಮ್ರಾ ಅವರ ಅನುಪಸ್ಥಿತಿಯ ಹೊರತಾಗಿಯೂ, ಭಾರತವು ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ.
ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ಅವರಿಗೆ ಐದು ವಾರಗಳ ವಿಶ್ರಾಂತಿಗೆ ಸಲಹೆ ನೀಡಲಾಗಿತ್ತು. ಆದರೆ, 31 ವರ್ಷದ ಸೀಮರ್ ಸಕಾಲದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ಗೆ ಮುಂಚಿತವಾಗಿ, ಬುಮ್ರಾ ನೆಟ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಪ್ರತಿದಿನ ಪ್ರಗತಿ' ಎಂದು ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಅಭಿಮಾನಿಗಳು ಇದೀಗ ಟೀಂ ಇಂಡಿಯಾದ ಸ್ಟಾರ್ ಆಟಗಾರ ಬುಮ್ರಾ ಮುಂದೆ ಹಲವಾರು ಬೇಡಿಕೆಗಳನ್ನು ಇಟ್ಟಿದ್ದಾರೆ. 'ಸೆಮಿ ಫೈನಲ್ ಖೇಲ್ ಲೋ ಜಸ್ಸಿ' ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ.
'ಜಸ್ಸಿ ಭಾಯ್ ಫೈನಲ್‌ಗೆ ಬರುತ್ತಿದ್ದಾರೆ' ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ. 'ಎಲ್ಲ ಆಟಗಾರರಲ್ಲಿ ಭಯದ ವಾತಾವರಣವಿದೆ' ಎಂದು ಮತ್ತೊಬ್ಬರು ಬರೆದಿದ್ದರೆ, 'ಬ್ರೋ ಜೂನ್‌ನಲ್ಲಿ ಇಂಗ್ಲೆಂಡ್ ಅನ್ನು ನಾಶಮಾಡಲು ಸಜ್ಜಾಗುತ್ತಿದ್ದಾರೆ' ಎಂದು ಇನ್ನೊಬ್ಬ ಅಭಿಮಾನಿ ಪೋಸ್ಟ್‌ನ ಅಡಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಬುಮ್ರಾ ಅವರನ್ನು ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಗಾಗಿ ಭಾರತ ತಂಡದಲ್ಲಿ ಹೆಸರಿಸಲಾಗಿತ್ತು. ಆದರೆ, ಬುಮ್ರಾ ಆ ಸಮಯಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರನ್ನು ಬಿಟ್ಟು 15 ಆಟಗಾರರನ್ನು ಒಳಗೊಂಡಿದ್ದ ತಂಡವು ದುಬೈಗೆ ಪ್ರಯಾಣ ಬೆಳೆಸಿತ್ತು.
Advertisement