
2024ರ ವರ್ಷವು ಭಾರತೀಯ ಕ್ರಿಕೆಟ್ ತಂಡಕ್ಕೆ ಅಷ್ಟೇನು ಉತ್ತಮವಾಗಿರಲಿಲ್ಲ. ಟಿ20 ವಿಶ್ವಕಪ್ ಗೆದ್ದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಅವಕಾಶದ ಮೇಲೂ ಕೆಟ್ಟ ಪರಿಣಾಮ ಬೀರಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ವೈಟ್‌ವಾಶ್, ನಂತರ ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳ ಸೋಲು ಭಾರತಕ್ಕೆ ಹಿನ್ನಡೆ ಉಂಟು ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಬಿಜಿಟಿ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ಟೀಂ ಇಂಡಿಯಾ ದಾರಿ ಕಠಿಣವಾಗಿದೆ. ಭಾರತ ತಂಡದ ಕಳಪೆ ಪ್ರದರ್ಶನದ ಬಗ್ಗೆ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ತರಾಟೆಗೆ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.
ಸರಣಿಯಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ತೋರದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿ ಎನ್ನುವ ಮಾತುಗಳು ಒಂದೆಡೆ ಕೇಳಿಬರುತ್ತಿದ್ದರೆ, ಜಸ್ಪ್ರೀತ್ ಬುಮ್ರಾ ನಾಯಕರಾಗಲಿ ಎನ್ನುವ ಮಾತುಗಳು ಮತ್ತೊಂದೆಡೆ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಇದೀಗ ಬಿಸಿಸಿಐ ಆಯ್ಕೆ ಸಮಿತಿಯ ಮೇಲಿದೆ.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿ ಎಂದು ಕ್ರಿಕೆಟ್ ಪಂಡಿತರು ಒತ್ತಾಯಿಸುತ್ತಿದ್ದಾರೆ. ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆಯುವ ಸಲುವಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದ ಶುಭಮನ್ ಗಿಲ್ ಅವರನ್ನು ಹೊರಗಿಟ್ಟ ನಂತರ ಈ ಮಾತುಗಳು ಹೆಚ್ಚು ಕೇಳಿಬರುತ್ತಿವೆ.
'ನಾನು ಈಗ ಆಯ್ಕೆಗಾರನಾಗಿದ್ದರೆ, ಅವರು (ರೋಹಿತ್ ಶರ್ಮಾ) ಉತ್ತಮ ರನ್ ಮಾಡದಿದ್ದರೆ... 'ರೋಹಿತ್, ನಿಮ್ಮ ಸೇವೆಗೆ ಧನ್ಯವಾದಗಳು. ನೀವು ಉತ್ತಮ ಆಟಗಾರರಾಗಿದ್ದೀರಿ. ಆದರೆ, ನಾವು ಸಿಡ್ನಿ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದೆ ಎಂದು ಆಸ್ಟ್ರೇಲಿಯಾದ ಬ್ಯಾಟಿಂಗ್ ಶ್ರೇಷ್ಠ ಮಾರ್ಕ್ ವಾ ಹೇಳಿದ್ದಾರೆ.
4ನೇ ಟೆಸ್ಟ್‌ನಲ್ಲಿ ಭಾರತದ ಸೋಲಿನ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೋಹಿತ್, ತೀವ್ರ ಬೇಸರವನ್ನು ಹೊರಹಾಕಿದರು. 'ನಮಗೆ ತುಂಬ ಬೇಸರ ಆಗುತ್ತಿದೆ. ನಮ್ಮ ಉದ್ದೇಶ ಸೋಲುವುದಾಗಿರಲಿಲ್ಲ. ಬ್ಯಾಟಿಂಗ್ ವೈಫಲ್ಯ ಮಾನಸಿಕವಾಗಿ ದೊಡ್ಡ ಸವಾಲು, ಇದು ದೊಡ್ಡ ನಿರಾಸೆ ತಂದಿದೆ. ನಾವು ತಂಡವಾಗಿ ಹಲವು ವಿಚಾರಗಳನ್ನು ನೋಡಬೇಕಿದೆ. ವೈಯಕ್ತಿಕವಾಗಿ ಕೂಡ ಉತ್ತಮ ಪ್ರದರ್ಶನ ನೀಡಬೇಕಿದೆ' ಎಂದು ಹೇಳಿದರು.
ಗೌತಮ್ ಗಂಭೀರ್‌ಗೆ ಆಘಾತ
ರಾಹುಲ್ ದ್ರಾವಿಡ್ ಅವರ ನಂತರ ಗೌತಮ್ ಗಂಭೀರ್ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ನೇಮಿಸಿದ ನಂತರ ಬಹಳಷ್ಟು ಆಘಾತಕಾರಿ ಫಲಿತಾಂಶಗಳು ಬಂದಿವೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಸೋಲು, ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ವೈಟ್ ವಾಶ್ ಮತ್ತು ಈಗ ಆಸ್ಟ್ರೇಲಿಯಾದಲ್ಲಿ ಬಿಜಿಟಿ ಸರಣಿಯ ಫಲಿತಾಂಶಗಳಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ರೇಸ್‌ನಿಂದ ಭಾರತ ಬಹುತೇಕ ಹೊರಬಿದ್ದಿದೆ, ಸಿಡ್ನಿ ಟೆಸ್ಟ್ ಗೆದ್ದು, ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ವೈಟ್ ವಾಶ್ ಮಾಡಿದರೆ ಮಾತ್ರ ಭಾರತ ಫೈನಲ್ ತಲುಪಲು ಅವಕಾಶವಿದೆ.
ತಂಡದ ಆಯ್ಕೆ ವಿಷಯಗಳು ಕೂಡ ಗಂಭೀರ್ ಅವರನ್ನು ಮುನ್ನೆಲೆಗೆ ತಂದು ನಿಲ್ಲಿಸಿವೆ. ಆದರೆ, ಕ್ರಿಕ್‌ಬಜ್ ವರದಿ ಪ್ರಕಾರ, ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಕೋಚ್‌ನ ಯಾವುದೇ ಪಾತ್ರವಿಲ್ಲ ಎಂದು ಹೇಳಿದೆ.
ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ನಂತರ ರವಿಚಂದ್ರನ್ ಅಶ್ವಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ್ದರಿಂದ ಈ ವಿಚಾರದಲ್ಲೂ ಗಂಭೀರ್ ಅವರ ಪಾತ್ರವನ್ನು ಸಹ ಪ್ರಶ್ನಿಸಲಾಗುತ್ತಿದೆ. ಆದರೆ, ಆ ನಿರ್ಧಾರದಲ್ಲಿ ಕೋಚ್‌ನ ಪಾತ್ರವಲ್ಲಿ ಎಂದು ವರದಿ ಹೇಳಿದೆ. ವಾಸ್ತವವಾಗಿ, ಗಂಭೀರ್ ಮತ್ತು ಅಶ್ವಿನ್ ಉತ್ತಮ ಸಂಬಂಧ ಹೊಂದಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಮುಕ್ತಾಯವಾದಾಗ ಬಿಸಿಸಿಐ ಉನ್ನತ ಅಧಿಕಾರಿಗಳು ಕೇಳುವ ಕೆಲವು ಕಠಿಣ ಪ್ರಶ್ನೆಗಳಿಗೆ ರೋಹಿತ್ ಮತ್ತು ಗಂಭೀರ್ ಇಬ್ಬರೂ ಉತ್ತರಿಸಬೇಕಿದೆ.
Advertisement