
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಪ್ಯಾಟ್ ಕಮಿನ್ಸ್ ಪಡೆ 3-1 ಅಂತರದಲ್ಲಿ ಸರಣಿ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸುವ ಮೂಲಕ ಆಸ್ಟ್ರೇಲಿಯ ತಂಡ 3-1ರ ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಂತೆಯೇ ಬರೊಬ್ಬರಿ ಒಂದು ದಶಕದ ಬಳಿಕ ಇದೇ ಪ್ರಥಮ ಬಾರಿಗೆ ಭಾರತ ತಂಡವು ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಸರಣಿ ಸೋತು ಟ್ರೋಫಿಯನ್ನು ಆಸ್ಟ್ರೇಲಿಯ ತಂಡಕ್ಕೆ ಬಿಟ್ಟುಕೊಟ್ಟಿದೆ.
ಆಸಿಸ್ ಅಭಿಮಾನಿಗಳಿಗೆ ಟ್ರೋಫಿ ಗೆದ್ದ ಖುಷಿ ಕೂಡ ಇಲ್ಲದಂತೆ ಮಾಡಿದ Virat Kohli
ಇನ್ನು ಪಂದ್ಯದ ವೇಳೆ ಭಾರತದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿದರು. ಒಂದಲ್ಲಾ ಒಂದು ವಿಚಾರಕ್ಕೆ ಕೊಹ್ಲಿಯನ್ನು ಕೆಣಕುತ್ತಿದ್ದ ಆಸಿಸ್ ಅಭಿಮಾನಿಗಳಿಗೆ ಕೊಹ್ಲಿ 'ಸ್ಯಾಂಡ್ ಪೇಪರ್' ವಿಚಾರದ ಮೂಲಕ ತಿರುಗೇಟು ಕೊಟ್ಟರು. 2ನೇ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್ ಔಟಾದಾಗ ಕೊಹ್ಲಿ ಆಸಿಸ್ ಅಭಿಮಾನಿಗಳತ್ತ ತಿರುಗಿ ತಮ್ಮ ಜೇಬು ಹೊರತೆಗೆದು ಇಲ್ಲಿ ಏನೂ ಇಲ್ಲ.. ಸ್ಯಾಂಡ್ ಪೇಪರ್ ಬಚ್ಚಿಟ್ಟಿಲ್ಲ ಎನ್ನುವ ಅರ್ಥದಲ್ಲಿ ಆಸಿಸ್ ಅಭಿಮಾನಿಗಳಿಗೆ ತಿರುಗೇಟು ನೀಡಿದರು.
ರೋಹಿತ್ ಶರ್ಮ ಹಾಗೂ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರೇಕ್ಷಕರ ಈ ಆರೋಪಕ್ಕೆ ಮೈದಾನದಲ್ಲೇ ತಿರುಗೇಟು ನೀಡಿದರು. 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸ್ಯಾಂಡ್ ಪೇಪರ್ ಬಳಕೆ ವಿವಾದದಲ್ಲಿ ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಹಾಗೂ ವೇಗಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಪ್ರಕರಣವನ್ನು ನೆನಪಿಸಿ ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ತಿರುಗೇಟು ನೀಡಿದರು.
ತಮ್ಮ ಪ್ಯಾಂಟ್ ಕಿಸೆಯನ್ನು ಹೊರಗೆಳೆದು ಅದರಲ್ಲಿ ಏನು ಇಲ್ಲ ಎಂಬಂತೆ ತೋರಿಸಿದರು. ಅಲ್ಲದೆ, ನನ್ನಲ್ಲಿ ಏನೂ ಇಲ್ಲ, ನಾವು ಸ್ಯಾಂಡ್ ಪೇಪರ್ ಬಳಕೆ ಮಾಡುವುದಿಲ್ಲ ಎಂದು ಸಂಜ್ಞೆಯ ಮೂಲಕ ತೋರಿಸಿದರು. ಇಂತಹ ವಿಚಾರಗಳಲ್ಲಿ ಭಾರತೀಯ ಆಟಗಾರರು ಆಸ್ಟ್ರೇಲಿಯಾ ಆಟಗಾರರಂತಲ್ಲ ಎಂದೂ ಸನ್ನೆಯ ಮೂಲಕ ಹೇಳಿದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಬುಮ್ರಾ ವಿರುದ್ಧ ಸ್ಯಾಂಡ್ ಪೇಪರ್ ಆರೋಪ ಮಾಡಿದ ಆಸಿಸ್ ಅಭಿಮಾನಿಗಳು
ಇದಕ್ಕೂ ಮುನ್ನ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಸ್ಯಾಂಡ್ ಪೇಪರ್ ಬಳಸುತ್ತಿದ್ದಾರೆ ಎಂಬ ವಿವಾದ ಮೈದಾನದಲ್ಲಿ ಕಾಣಿಸಿಕೊಂಡಿತು. ಬುಮ್ರಾ ತಮ್ಮ ಶೂನಲ್ಲಿ ಏನೋ ಇಟ್ಟುಕೊಂಡಿದ್ದಾರೆ ಎಂದು ಆಸಿಸ್ ಅಭಿಮಾಗಳು ಪದೇ ಪದೇ ಭಾರತೀಯ ಆಟಗಾರರನ್ನು ಕೆಣಕುತ್ತಿದ್ದರು.
ಸಿಡ್ನಿ ಟೆಸ್ಟ್ ನ ಎರಡನೆ ದಿನದಾಟದ ನಂತರ, ಕೆಲವು ಆಸ್ಟ್ರೇಲಿಯ ತಂಡದ ಅಭಿಮಾನಿಗಳು ಭಾರತ ತಂಡವು ಸ್ಯಾಂಡ್ ಪೇಪರ್ ಬಳಸುತ್ತಿದೆ ಎಂದು ಆರೋಪಿಸಿದ್ದರು. ಭಾರತೀಯ ಆಟಗಾರರ ಬೂಟುಗಳಿಂದ ಹೊರಬರುವ ಕಾಗದ/ಬಟ್ಟೆಯ ತುಣುಕುಗಳ ವಿಡಿಯೊ ಹರಿದಾಡಿದ ನಂತರ, ಸಾಮಾಜಿಕ ಜಾಲತಾಣಗಳಲ್ಲೂ ಇದೇ ಬಗೆಯ ಚರ್ಚೆ ನಡೆದಿತ್ತು.
Advertisement