
ಮುಂಬೈ: ಇಂಗ್ಲೆಂಡ್ ವಿರುದ್ದದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡ ಸಜ್ಜಾಗಿರುವಂತೆಯೇ ಇತ್ತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ವೇಗಿ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ಹೌದು.. ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಗಳ ಸರಣಿಗೆ ಪ್ರಮುಖ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದ ಭಾರತ ತಂಡದ ವೇಗದ ಬೌಲಿಂಗ್ ಸೆನ್ಸೇಷನ್ ಆಟಗಾರ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಇಡೀ ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ಅಲಭ್ಯರಾಗುವ ಸಾಧ್ಯತೆ ಇದೆ ಹೇಳಲಾಗಿದೆ.
ಕಳೆದ ವರ್ಷವಷ್ಟೇ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ ವೇಳೆ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದ ಉದಯೋನ್ಮುಖ ವೇಗದ ಬೌಲರ್ ಮಯಾಂಕ್ ಯಾದವ್ ಬೆನ್ನು ನೋವಿಗೆ ತುತ್ತಾಗಿದ್ದು, ಬ್ಯಾಕ್ ಇಂಜುರಿ ಸಮಸ್ಯೆಯಿಂದಾಗಿ ಸೀಮಿತ ಓವರ್ ಗಳ ಸರಣಿಗೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೇ ಬೆನ್ನು ನೋವಿನ ಕಾರಣದಿಂದಾಗಿಯೇ ಮಯಾಂಕ್ ಈ ಹಿಂದೆ ಸೌರಾಷ್ಟ್ರ ವಿರುದ್ಧದ ದೆಹಲಿಯ ರಣಜಿ ಟ್ರೋಫಿ ಎರಡನೇ ಲೆಗ್ ಪಂದ್ಯದಲ್ಲೂ ಮೈದಾನಕ್ಕೆ ಇಳಿದಿರಲಿಲ್ಲ. ಮಯಾಂಕ್ ಯಾದವ್ ಗಾಯದ ಗಂಭೀರತೆ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲವಾದರೂ ಮುಂದಿನವಾರ ಬಿಸಿಸಿಐನ ಆಯ್ಕೆ ಸಮಿತಿ ಸಭೆ ಸೇರುವ ಹೊತ್ತಿಗೆ ಮಯಾಂಕ್ ಯಾದವ್ ಗುಣಮುಖರಾಗದಿದ್ದರೆ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಏಕದಿನ, ಟೆಸ್ಟ್ ಪದಾರ್ಪಣೆ ಮುಂದೂಡಿಕೆ?
ಒಂದು ವೇಳೆ ಆಯ್ಕೆ ಸಮಿತಿ ಸಭೆ ವೇಳೆಗೆ ಮಯಾಂಕ್ ಚೇತರಿಸಿಕೊಳ್ಳದಿದ್ದರೆ ಅವರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಕೂಡ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ವೇಳೆ ಭಾರತದ ವೇಗದ ಆಸ್ತ್ರ ಜಸ್ ಪ್ರೀತ್ ಬುಮ್ರಾ ಗಾಯಗೊಂಡ ಹಿನ್ನಲೆಯಲ್ಲಿ ಅವರಿಗೆ ಬದಲಿಯಾಗಿ ಮಯಾಂಕ್ ಯಾದವ್ ರನ್ನು ಕಣಕ್ಕಿಳಿಸಲು ಆಯ್ಕೆ ಸಮಿತಿ ಚಿಂತನೆಯಲ್ಲಿತ್ತು ಎನ್ನಲಾಗಿದೆ. ಆದರೆ ಇದೀಗ ಮಯಾಂಕ್ ಗಾಯಗೊಂಡಿರುವುದು ಆಯ್ಕೆ ಸಮಿತಿ ಇತರೆ ಆಯ್ಕೆಗಳತ್ತೆ ದೃಷ್ಟಿ ಹಾಯಿಸುವಂತೆ ಮಾಡಿದೆ.
ಉಳಿದಂತೆ ಹಿರಿಯ ವೇಗಿಗಳಾದ ಮಹಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್ ರಂತಹ ಸ್ಟಾರ್ ಆಟಗಾರರು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಆಡುವುದು ಖಚಿತವಾಗಿದೆ.
Advertisement