
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಐಪಿಎಲ್ ಆವೃತ್ತಿಯು ಮಾರ್ಚ್ 21ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿರುವುದಾಗಿ ಕ್ರಿಕ್‌ಬುಜ್ ವರದಿ ಮಾಡಿದೆ.
ಮುಂಬೈನಲ್ಲಿ ನಡೆದ ಬಿಸಿಸಿಐ ವಿಶೇಷ ಮಹಾಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ, ಮೇ 21ರಂದು ಉದ್ಘಾಟನಾ ಪಂದ್ಯ ನಡೆಯಲಿದೆ ಮತ್ತು ಮೇ 25 ರಂದು ಅಂತಿಮ ಪಂದ್ಯ ನಡೆಯಲಿದೆ. WPL ಗಾಗಿ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಶೀಘ್ರದಲ್ಲೇ ಘೋಷಿಸಲಾಗುವುದು ಎಂದಿದ್ದಾರೆ.
ಬಿಸಿಸಿಐ ಸಭೆಯಲ್ಲಿ ಪ್ರಭ್ತೇಜ್ ಸಿಂಗ್ ಭಾಟಿಯಾರನ್ನು ಖಜಾಂಚಿಯನ್ನಾಗಿ ಮತ್ತು ದೇವಜಿತ್ ಸೈಕಿಯಾರನ್ನು ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಹಿಳೆಯರ ಪ್ರೀಮಿಯರ್ ಲೀಗ್ (WPL) ಪಂದ್ಯಗಳು ನಡೆಯುವ ಸ್ಥಳದ ಬಗ್ಗೆ ಬಹುತೇಕ ಅಂತಿಮಗೊಂಡಿದೆ ಎಂದು ಹೇಳಿದರು.
ಐಪಿಎಲ್ ಒಂದು ವರ್ಷದ ಅವಧಿಗೆ ಹೊಸ ಆಯುಕ್ತರ ನೇಮಕವನ್ನು ಪ್ರಕಟಿಸಿದೆ. ಜನವರಿ 18-19 ರಂದು ನಡೆಯಲಿರುವ ಮುಂದಿನ ಸಭೆಯು ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಅಂತಿಮಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದರು.
ಚಾಂಪಿಯನ್ಸ್ ಟ್ರೋಫಿ ಮುಗಿದ ಕೆಲವೇ ದಿನಗಳ ಬಳಿಕ ಐಪಿಎಲ್ ಆರಂಭವಾಗಲಿದೆ. ಆದರೆ, ಮಹಿಳಾ ಪ್ರೀಮಿಯರ್ ಲೀಗ್ ಯಾವಾಗ ನಡೆಸುತ್ತಾರೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಐಪಿಎಲ್‌ಗೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ ನಡೆಯುವುದು ವಾಡಿಕೆಯಾಗಿದ್ದು, ಐಪಿಎಲ್‌ಗೆ ಮೊದಲೇ ಮುಗಿಯಬೇಕಾಗುತ್ತದೆ.
ಕೋಲ್ಕತ್ತಾದಲ್ಲಿ ಉದ್ಘಾಟನಾ ಪಂದ್ಯ
ಈ ಬಾರಿ ಐಪಿಎಲ್‌ನ ಉದ್ಘಾಟನಾ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ವಾಡಿಕೆಯಂತೆ ಐಪಿಎಲ್ ಹೊಸ ಆವೃತ್ತಿಯ ಉದ್ಘಾಟನಾ ಪಂದ್ಯವನ್ನು ಹಾಲಿ ಚಾಂಪಿಯನ್ ತವರಿನಲ್ಲಿ ಆಯೋಜಿಸಲಾಗುತ್ತದೆ. ಅದರಂತೆ 2024ರ ಐಪಿಎಲ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಕೆಕೆಆರ್ ತವರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಕೂಡ ಈಡನ್ ಗಾರ್ಡನ್ಸ್‌ನಲ್ಲೇ ನಡೆಯಲಿದೆ.
ಐಪಿಎಲ್ 2024ನೇ ಆವೃತ್ತಿಯ ಆರಂಭದ ಪಂದ್ಯದಲ್ಲಿ ಮಾರ್ಚ್ 22 ರಂದು RCB ಮತ್ತು CSK ಮುಖಾಮುಖಿಯಾಗಿದ್ದವು. ಮೇ 26 ರಂದು ಅಂತಿಮ ಪಂದ್ಯ ನಡೆಯಿತು. 2024ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ ನಡೆದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಒಟ್ಟು 182 ಆಟಗಾರರು 639.15 ಕೋಟಿ ರೂ.ಗೆ ಬಿಕರಿಯಾದರು. ಎಲ್ಲಾ ತಂಡಗಳು ಬಲಿಷ್ಠ ತಂಡವನ್ನು ಆಯ್ಕೆ ಮಾಡಿವೆ. ಲಕ್ನೋ ಸೂಪರ್ ಜೈಂಟ್ಸ್ ರಿಷಬ್ ಪಂತ್‌ಗೆ ಬರೋಬ್ಬರಿ 27 ಕೋಟಿ ರೂಪಾಯಿ ನೀಡುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಐಪಿಎಲ್ ಇತಿಹಾಸದಲ್ಲಿ ರಿಷಬ್ ಪಂತ್ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಖರೀದಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ.
Advertisement