
ನವದೆಹಲಿ: ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೈಬಿಟ್ಟಿದ್ದ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಮುಂಚಿತವಾಗಿ ಫ್ರಾಂಚೈಸಿಯ ನಾಯಕನನ್ನಾಗಿ ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರನ್ನು ನೇಮಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ತಂಡವನ್ನು ಎರಡು ಬಾರಿ ಪ್ಲೇಆಫ್‌ಗೆ ಮುನ್ನಡೆಸಿದ್ದರೂ ಕಪ್ ಗೆಲ್ಲಲು ವಿಫಲವಾದ ಕಾರಣಕ್ಕೆ ಕೆಎಲ್ ರಾಹುಲ್ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಲಕ್ನೋ ಫ್ರಾಂಚೈಸಿ ಕೈಬಿಟ್ಟಿತ್ತು. ಬಳಿಕ LSG ತಂಡವು ಬರೋಬ್ಬರಿ 27 ಕೋಟಿ ರೂ. ನೀಡಿ ಪಂತ್ ಅವರನ್ನು ಖರೀದಿಸಿತು ಮತ್ತು ಲೀಗ್ ಇತಿಹಾಸದಲ್ಲಿಯೇ ಅವರು ಅತ್ಯಂತ ದುಬಾರಿ ಆಟಗಾರರಾದರು. 26.75 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗುವ ಮೂಲಕ ಶ್ರೇಯಸ್ ಅಯ್ಯರ್ ಲೀಗ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು.
ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿತ್ತು. ಬಳಿಕ ನಡೆದ ಮೆಗಾ ಹರಾಜಿನಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಪಾಲಾದರು. ಈ ಮೂಲಕ ಉಭಯ ಆಟಗಾರರು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದರು. ಮಿಚೆಲ್ ಅವರು 24.75 ಕೋಟಿ ರೂ.ಗೆ ಹರಾಜಾಗಿದ್ದರು.
ಪಂತ್ ಅವರನ್ನು ಖರೀದಿಸಲು ಆರಂಭದಲ್ಲಿ ಎಲ್‌ಎಸ್‌ಜಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು. ಆದರೆ, ಆರ್‌ಸಿಬಿ ಕೈಬಿಟ್ಟ ನಂತರ ಸನ್‌ರೈಸರ್ಸ್ ಹೈದರಾಬಾದ್ (SRH) ಬಿಡ್ಡಿಂಗ್ ಅನ್ನು ಮುಂದುವರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ 'ರೈಟ್ ಟು ಮ್ಯಾಚ್' ಕಾರ್ಡ್ ಅನ್ನು ಬಳಸಲು ಪ್ರಯತ್ನಿಸಿತು. ಆದರೂ, ಪಂತ್ ದುಹಾರಿ ಮೊತ್ತಕ್ಕೆ ಎಲ್ಎಸ್‌ಜಿ ಪಾಲಾದರು.
ಪಂತ್ 2016 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆಡಿರುವ 110 ಪಂದ್ಯಗಳಲ್ಲಿ 3,284 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 18 ಅರ್ಧಶತಕಗಳನ್ನು ಗಳಿಸಿದ್ದಾರೆ. 2021 ರಲ್ಲಿ ಪಂತ್ ತಂಡದ ನಾಯಕನ ಸ್ಥಾನಕ್ಕೇರಿದರು ಅದೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ಗೆ ಪ್ರವೇಶಿಸಿತ್ತು.
ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಬ್ಯಾಟ್ಸ್‌ಮನ್‌ಗಳು: ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರೀಟ್ಜ್‌ಕೆ.
ವಿಕೆಟ್ ಕೀಪರ್‌ಗಳು: ರಿಷಬ್ ಪಂತ್, ನಿಕೋಲಸ್ ಪೂರನ್, ಆರ್ಯನ್ ಜುಯಲ್.
ಆಲ್‌ರೌಂಡರ್‌ಗಳು: ಅಬ್ದುಲ್ ಸಮದ್ (ಸ್ಪಿನ್), ಮಿಚೆಲ್ ಮಾರ್ಷ್ (ಪೇಸ್), ಶಹಬಾಜ್ ಅಹ್ಮದ್ (ಸ್ಪಿನ್), ಯುವರಾಜ್ ಚೌಧರಿ (ಸ್ಪಿನ್), ರಾಜವರ್ಧನ್ ಹಂಗರ್ಗೇಕರ್ (ಪೇಸ್), ಅರ್ಶಿನ್ ಕುಲಕರ್ಣಿ (ಪೇಸ್).
ಸ್ಪಿನ್ನರ್‌ಗಳು: ರವಿ ಬಿಷ್ಣೋಯ್, ಎಂ ಸಿದ್ಧಾರ್ಥ್, ದಿಗ್ವೇಶ್ ಸಿಂಗ್.
ವೇಗದ ಬೌಲರ್‌ಗಳು: ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಕಾಶ್ ದೀಪ್, ಅವೇಶ್ ಖಾನ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್.
Advertisement