
ಮುಂಬೈ: ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಇದೀಗ ಮತ್ತೆ ಮುಗ್ಗರಿಸಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಯೂ ವೈಫಲ್ಯ ಕಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಷ್ ಮುಖಭಂಗ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಸೋಲಿನ ಬಳಿಕ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ ಎಂದು ವರದಿಯಾಗಿದ್ದು, ರಣಜಿ ಟ್ರೋಫಿಯಲ್ಲಿ ಆಡಿದ್ದ ಆಟಗಾರರು ಮತ್ತೆ ಕಳಪೆ ಪ್ರದರ್ಶನ ನೀಡಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೇವಲ 31 ರನ್ ಗಳಿಸಿದ್ದ ರೋಹಿತ್ ಶರ್ಮಾ ಇದೀಗ ಮುಂಬೈ ಪರ ಆಡುತ್ತಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧ ಮುಂಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಕೇವಲ ಮೂರು ರನ್ ಗಳಿಸಿ ಔಟ್ ಆಗಿದ್ದಾರೆ. 19 ಎಸೆತಗಳನ್ನು ಎದುರಿಸಿದ ರೋಹಿತ್, ಉಮರ್ ನಜೀರ್ ಅವರ ಎಸೆತದಲ್ಲಿ ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ಅವರಿಗೆ ಕ್ಯಾಚ್ ನೀಡಿದರು.
ಇನ್ನೊಂದೆಡೆ ಮುಂಬೈ ಪರವಾಗಿ ಆಡಿದ್ದ ಟೀಂ ಇಂಡಿಯಾದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಕೂಡ ಕೇವಲ ನಾಲ್ಕು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿಗಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್ ಕೂಡ ಕೇವಲ 11 ರನ್ ಗಳಿಸಿ ವೇಗಿ ಯುಧ್ವೀರ್ ಸಿಂಗ್‌ಗೆ ಕ್ಯಾಚ್ ನೀಡಿದರು.
ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಪರವಾಗಿ ಆಡಿದ ರಿಷಭ್ ಪಂತ್ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಸೌರಾಷ್ಟ್ರದ ಅನುಭವಿ ಎಡಗೈ ಸ್ಪಿನ್ನರ್ ಧರ್ಮೇಂದ್ರ ಸಿಂಗ್ ಜಡೇಜಾ ಅವರ 10 ಎಸೆತಗಳಲ್ಲಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಸೌರಾಷ್ಟ್ರ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ಮತ್ತು ಕರ್ನಾಟಕ ನಡುವಿನ ಪಂದ್ಯದಲ್ಲಿ ಶುಭಮನ್ ಗಿಲ್ ಕೇವಲ 4 ರನ್ ಗಳಿಸಿ ನಿರ್ಗಮಿಸಿದ್ದಾರೆ. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಕರ್ನಾಟಕದ ಅಭಿಲಾಷ್ ಶೆಟ್ಟಿ ಅವರು ಗಿಲ್ ಅವರನ್ನು ಔಟ್ ಮಾಡಿದರು.
Advertisement