Ranji trophy, Karnataka vs Punjab: ಶುಭಮನ್ ಗಿಲ್ 102 ರನ್ ವ್ಯರ್ಥ; ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಗೆಲುವು

ಗಿಲ್ ಅವರು 171 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸುವ ಮೂಲಕ 102 ರನ್‌ಗಳನ್ನು ಕಲೆಹಾಕಿದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್‌ಗಳಿಗೆ ಪತನಗೊಂಡಿದ್ದ ಗಿಲ್ ಎರಡನೇ ಇನಿಂಗ್ಸ್‌ನಲ್ಲಿ ತಾಳ್ಮೆಯ ಆಟವಾಡಿದರು.
ಶುಭಮನ್ ಗಿಲ್
ಶುಭಮನ್ ಗಿಲ್
Updated on

ಬೆಂಗಳೂರು: ಶನಿವಾರ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ತಂಡ ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್ ನಾಯಕ ಶುಭಮನ್ ಗಿಲ್ (102) ಶತಕ ಬಾರಿಸಿದರೂ, ಕರ್ನಾಟಕ ವಿರುದ್ಧ ಇನಿಂಗ್ಸ್ ಸೋಲಿನಿಂದ ತಂಡವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಗಿಲ್ ಅವರು 171 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸುವ ಮೂಲಕ 102 ರನ್‌ಗಳನ್ನು ಕಲೆಹಾಕಿದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್‌ಗಳಿಗೆ ಪತನಗೊಂಡಿದ್ದ ಗಿಲ್ ಎರಡನೇ ಇನಿಂಗ್ಸ್‌ನಲ್ಲಿ ತಾಳ್ಮೆಯ ಆಟವಾಡಿದರು. ಬಳಿಕ ಶ್ರೇಯಸ್‌ ಗೋಪಾಲ್‌ ಅವರ ಎಸೆತದಲ್ಲಿ ಔಟ್ ಆದರು.

ಟಾಸ್ ಗೆದ್ದ ಕರ್ನಾಟಕ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಪಂಜಾಬ್ ತಂಡ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಇನಿಂಗ್ಸ್‌ನಲ್ಲಿ ಗಿಲ್ ಕೇವಲ ನಾಲ್ಕು ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಕರ್ನಾಟಕದ ಪರ ವಿ ಕೌಶಿಕ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3, ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ನಂತರ ಬ್ಯಾಟಿಂಗ್ ಮಾಡಿದ್ದ ಕರ್ನಾಟಕ 475 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ 420 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿತ್ತು. ಸ್ಮರಣ್ ರವಿಚಂದ್ರನ್ ಅವರ ಅಮೋಘ ದ್ವಿಶತಕ ಕರ್ನಾಟಕವು ಮುನ್ನಡೆ ಪಡೆಯಲು ಕಾರಣವಾಯಿತು.

ಶುಭಮನ್ ಗಿಲ್
Ranji Trophy: ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ; ರಣಜಿಯಲ್ಲೂ ಮುಗ್ಗರಿಸಿದ ಟೀಮ್ ಇಂಡಿಯಾ ಸ್ಟಾರ್ ಆಟಗಾರರು!

ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಎರಡನೇ ದಿನದಾಟದ ಅಂತ್ಯಕ್ಕೆ 23 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶುಭಮನ್ ಗಿಲ್ ಹೊರತುಪಡಿಸಿ ಉಳಿದ ಯೊವೊಬ್ಬ ಆಟಗಾರರು ಕರ್ನಾಟಕದ ಬೌಲಿಂಗ್ ದಾಳಿಗೆ ತಕ್ಕ ಉತ್ತರ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಪಂಜಾಬ್ 63.4 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ ತಂಡವು ಇನಿಂಗ್ಸ್ ಮತ್ತು 207 ರನ್‌ಗಳ ಅಭೂತಪೂರ್ವ ಗೆಲುವನ್ನು ತನ್ನದಾಗಿಸಿಕೊಂಡಿತು.

ಇನಿಂಗ್ಸ್ ಗೆಲುವಿಗೆ ಕರ್ನಾಟಕದ ಬೋನಸ್ ಪಾಯಿಂಟ್ ಸೇರಿದಂತೆ ಏಳು ಪಾಯಿಂಟ್‌ಗಳನ್ನು ಕಲೆಹಾಕಿದೆ. ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕದ ಪರ ಯಶೋವರ್ಧನ್ ಪರಂತಾಪ್ ಮತ್ತು ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಪಡೆದರೆ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು. ವಾಸುಕಿ ಕೌಶಿಕ್ ಮತ್ತು ಅಭಿಲಾಷ್ ಶೆಟ್ಟಿ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ನೆರವಾದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com