
ನವದೆಹಲಿ: ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳ ದಂಡೇ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದು, ಗುರುವಾರ ಬೆಳಿಗ್ಗೆ ನೂಕುನುಗ್ಗಲು ಉಂಟಾಗಿದೆ ಎಂದು ವರದಿಯಾಗಿದೆ. ಪಂದ್ಯದ ನಡುವೆಯೇ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದಿದ್ದಾರೆ.
ದೆಹಲಿ ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದು, ರೈಲ್ವೇಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಸ್ಟೇಡಿಯಂನ ಹೊರಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಗುನುಗ್ಗಲು ಉಂಟಾಯಿತು. ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ, ಪ್ರವೇಶಕ್ಕಾಗಿ ಒಂದು ಗೇಟ್ ಮಾತ್ರ ತೆರೆದಿತ್ತು ಮತ್ತು ಜನರು ಕ್ರೀಡಾಂಗಣದೊಳಗೆ ಪ್ರವೇಶಿಸಲು ಪರಸ್ಪರ ತಳ್ಳಲು ಪ್ರಾರಂಭಿಸಿದರು. ಹೀಗಾಗಿ ಕೂಡಲೇ ಹೆಚ್ಚುವರಿ ಗೇಟ್‌ಗಳನ್ನು ತೆರೆಯಲಾಯಿತು. ಪರಿಸ್ಥಿತಿಯನ್ನು ಸುಗಮಗೊಳಿಸಲಾಯಿತು ಎಂದು ದೆಹಲಿ ಪೊಲೀಸ್ ಹೇಳಿಕೆ ತಿಳಿಸಿದೆ.
ಮೊದಲಿಗೆ, DDCA ಸುಮಾರು 6,000 ಆಸನ ಸಾಮರ್ಥ್ಯದ 'ಗೌತಮ್ ಗಂಭೀರ್ ಸ್ಟ್ಯಾಂಡ್' ಅನ್ನು ವೀಕ್ಷಕರಿಗೆ ತೆರೆಯಿತು. ಆದರೆ, ಪ್ರೇಕ್ಷಕರು ಹೆಚ್ಚಿದ್ದ ಕಾರಣ ಪರಿಸ್ಥಿತಿ ಕೈ ಮೀರಬಹುದೆಂದು ಗ್ರಹಿಸಿದ ಅಧಿಕಾರಿಗಳು ಸುಮಾರು 11,000 ಜನರಿಗೆ ಅವಕಾಶ ಕಲ್ಪಿಸುವ 'ಬಿಶನ್ ಸಿಂಗ್ ಬೇಡಿ ಸ್ಟ್ಯಾಂಡ್' ಅನ್ನು ತೆರೆದರು. ಅದು ಕೂಡ ಕೆಲವೇ ಕ್ಷಣಗಳಲ್ಲಿ ತುಂಬಿಹೋಯಿತು.
'ನಾನು ರಣಜಿ ಟ್ರೋಫಿಯಲ್ಲಿ ಈ ರೀತಿಯದ್ದನ್ನು ಎಂದಿಗೂ ನೋಡಿಲ್ಲ. ನಾನು ಆಟವಾಡುತ್ತಿದ್ದ ದಿನಗಳಲ್ಲಿಯೂ ಸಹ ದೇಶೀಯ ಕ್ರಿಕೆಟ್ ಅನ್ನು ವೀಕ್ಷಿಸುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಇದೀಗ ಕ್ರೀಡಾಂಗಣದಲ್ಲಿ ಇಷ್ಟೊಂದು ಮಂದಿ ಸೇರಿರುವುದಕ್ಕೆ ಒಬ್ಬ ವ್ಯಕ್ತಿ ಕಾರಣ' ಎಂದು ಮೈದಾನದಲ್ಲಿದ್ದ ಭಾರತದ ಮಾಜಿ ಆಟಗಾರರೊಬ್ಬರು ಹೇಳಿದರು.
'ನಾನು 30 ವರ್ಷಗಳಿಂದ ದೆಹಲಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ರಣಜಿ ಪಂದ್ಯದವ್ವಿ ನಾನು ಇಂತಹ ದೃಶ್ಯವನ್ನು ಎಂದಿಗೂ ನೋಡಿಯೇ ಇಲ್ಲ. ಇದು ಕೊಹ್ಲಿಯ ಜನಪ್ರಿಯತೆಗೆ ಸಾಟಿಯಿಲ್ಲ ಎಂಬುದನ್ನು ತೋರಿಸುತ್ತದೆ' ಎಂದು ಡಿಡಿಸಿಎ ಕಾರ್ಯದರ್ಶಿ ಅಶೋಕ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಟಾಸ್ ವೇಳೆಗೆ ಪ್ರೇಕ್ಷಕರ ಸಂಖ್ಯೆ 12,000 ದಾಟಿತು. ಇಂದು ಪಂದ್ಯ ಆರಂಭವಾಗುತ್ತಿದ್ದಂತೆಯೇ ಅಭಿಮಾನಿಗಳು 'ಕೊಹ್ಲಿ, ಕೊಹ್ಲಿ' ಎಂದು ಕೂಗಲು ಆರಂಭಿಸಿದರು. ವಿರಾಟ್ ಕೊಹ್ಲಿ ಕೊನೆಯ ಬಾರಿಗೆ 2012ರಲ್ಲಿ ಉತ್ತರ ಪ್ರದೇಶದ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ದೆಹಲಿ ಪರವಾಗಿ ಆಡಿದ್ದರು.
ಮೈದಾನಕ್ಕೆ ನುಗ್ಗಿ ಕಾಲಿಗೆ ಬಿದ್ದ ಅಭಿಮಾನಿ
ಅದೆಷ್ಟೇ ವರ್ಷ ಕಳೆದರೂ ವಿರಾಟ್ ಕೊಹ್ಲಿ ಬಗ್ಗೆ ಅಭಿಮಾನಿಗಳಿಗಿರುವ ಕ್ರೇಜ್ ಕಡಿಮೆಯಾಗಿಲ್ಲ. 12 ವರ್ಷಗಳ ಬಳಿಕ ರಣಜಿಗೆ ಮರಳಿರುವ ತಮ್ಮ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಅಭಿಮಾನಿಗಳು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದಾರೆ.
ಟಾಸ್ ಗೆದ್ದ ದೆಹಲಿ ತಂಡ ಮೊದಲಿಗೆ ಬೌಲಿಂಗ್ ಆಯ್ದುಕೊಂಡಿದೆ. ಪಂದ್ಯದ ನಡುವೆಯೇ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಅವರ ಬಳಿ ಓಡಿದ್ದಾರೆ. ಕೊಹ್ಲಿ ಅವರ ಕಾಲಿಗೆ ಬಿದ್ದಿದ್ದಾರೆ. ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಕೂಡಲೇ ಆತನನ್ನು ಹೊರಗೆ ಎಳೆದೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರವಾಗಿ ಆಡುತ್ತಿದ್ದು, ಅಭಿಮಾನಿಗಳು ಕೇವಲ ಕರ್ನಾಟಕಕ್ಕೆ ಮೀಸಲಾಗಿಲ್ಲ. ಬದಲಿಗೆ ದೆಹಲಿಯಲ್ಲೂ ಆರ್‌ಸಿಬಿ ಅಭಿಮಾನಿಗಳು ಕೊಹ್ಲಿಯನ್ನು ಸಂಭ್ರಮಿಸುತ್ತಿದ್ದಾರೆ. ಕೊಹ್ಲಿಯನ್ನು ಕಾಣಲು ಅರುಣ್ ಜೇಟ್ಲಿ ಸ್ಟೇಡಿಯಂನ ಹೊರಗೆ ಸುಮಾರು 2 ಕಿಮೀ ವರೆಗೂ ಸಾಲಿನಲ್ಲಿ ನಿಂತಿರುವ ಅಭಿಮಾನಿಗಳ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
Advertisement