India vs England: Shubman Gill ಅಬ್ಬರದ ನಡುವೆಯೇ Ravindra Jadeja ಐತಿಹಾಸಿಕ ದಾಖಲೆ, ಜಗತ್ತಿನ ಮೊದಲ ಆಟಗಾರ!
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಆಲ್ರೌಂಡರ್ ರವೀಂದ್ರ ಜಡೇಜಾ ಐತಿಹಾಸಿಕ ದಾಖಲೆ ನಿರ್ಮಿಸಿದ್ದು ಈ ರೆಕಾರ್ಡ್ ನಿರ್ಮಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ವೇಳೆ ರವೀಂದ್ರ ಜಡೇಜಾ ಅವರು 89 ರನ್ ಗಳಿಸಿ ಕೇವಲ 11 ರನ್‌ಗಳಿಂದ ಶತಕ ವಂಚಿತರಾದರು. 137 ಎಸೆತಗಳನ್ನು ಎದುರಿಸಿದ ರವೀಂದ್ರ ಜಡೇಜಾ 1 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 89 ರನ್ ಕಲೆಹಾಕಿ ನಾಯಕ ಶುಭ್ ಮನ್ ಗಿಲ್ ಉತ್ತಮ ಸಾಥ್ ನೀಡಿದರು. 6ನೇ ವಿಕೆಟ್ ಗೆ ಈ ಜೋಡಿ 200ಕ್ಕೂ ಅಧಿಕ ರನ್ ಜೊತೆಯಾಟವಾಡಿತು.
ಐತಿಹಾಸಿಕ ದಾಖಲೆ
ಇದೇ ವೇಳೆ ರವೀಂದ್ರ ಜಡೇಜಾ ಭಾರತದ ಪರ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಅವರು ಇಂಗ್ಲೆಂಡ್‌ನಲ್ಲಿ 700 ಕ್ಕೂ ಹೆಚ್ಚು ರನ್ ಮತ್ತು 25 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತ ಮತ್ತು ಏಷ್ಯಾದ ಮೊದಲ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದಲ್ಲದೆ, ಕಪಿಲ್ ದೇವ್ ನಂತರ ಇಂಗ್ಲೆಂಡ್‌ನಲ್ಲಿ 7 ರಿಂದ 11 ನೇ ಕ್ರಮಾಂಕದಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ.
ಜಗತ್ತಿನ ಮೊದಲ ಆಟಗಾರ
ಅಂತೆಯೇ ರವೀಂದ್ರ ಜಡೇಜಾ ಇದುವರೆಗೆ ಇಂಗ್ಲೆಂಡ್ ವಿರುದ್ದ 28 ವಿಕೆಟ್‌ಗಳನ್ನು ಕಬಳಿಸಿದ್ದು 700 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ವಿದೇಶಿ ಬ್ಯಾಟ್ಸ್‌ಮನ್‌ನಿಂದ ಅತಿ ಹೆಚ್ಚು ರನ್ ಗಳಿಸಿದವರೆಂದರೆ ವೆಸ್ಟ್ ಇಂಡೀಸ್‌ನ ದಂತಕಥೆ ಗ್ಯಾರಿ ಸೋಬರ್ಸ್. ಅವರು 1820 ರನ್‌ಗಳನ್ನು ಗಳಿಸಿದ್ದು, 62 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಚಾರ್ಲ್ಸ್ ಮೆಕ್ಕರ್ಟ್ನಿ ಅವರು 1118 ರನ್ ಬಾರಿಸಿದ್ದು, 28 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಂಟಿ ನೋಬಲ್ ಅವರು ಇಂಗ್ಲೆಂಡ್‌ನಲ್ಲಿ 848 ರನ್ ಕಲೆಹಾಕುವುದರ ಜೊತೆಗೆ 37 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮಾಂಟಿ ನೋಬಲ್ ನಂತರದ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ 848 ರನ್ ಜೊತೆಗೆ 39 ವಿಕೆಟ್‌ಗಳನ್ನು ಪಡೆದಿದ್ದಾರೆ. ಈಗ ಜಡೇಜಾ ಕೂಡ ಈ ಸಾಧನೆ ಮಾಡಿದ್ದಾರೆ. ಇದು ಮಾತ್ರವಲ್ಲದೆ ಇಂಗ್ಲೆಂಡ್‌ನಲ್ಲಿ ವಿದೇಶಿ ಬ್ಯಾಟ್ಸ್‌ಮನ್‌ಗಳು 7 ರಿಂದ 11 ನೇ ಕ್ರಮಾಂಕದ ನಡುವೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜಡೇಜಾ ಕೂಡ ಸ್ಥಾನ ಪಡೆದಿದ್ದಾರೆ. ಜಡೇಜಾ ಇಲ್ಲಿಯವರೆಗೆ 692 ರನ್ ಗಳಿಸಿದ್ದಾರೆ. ಅವರಲ್ಲದೆ, ಕಪಿಲ್ ದೇವ್ ಮತ್ತು ರಾಡ್ ಮಾರ್ಷ್ ಕೂಡ ಈ ಪಟ್ಟಿಯಲ್ಲಿದ್ದು, ಕಪಿಲ್ ದೇವ್ ಇಂಗ್ಲೆಂಡ್‌ನಲ್ಲಿ 638 ರನ್ ಗಳಿಸಿದ್ದರೆ, ರಾಡ್ ಮಾರ್ಷ್ 729 ರನ್ ಗಳಿಸಿದ್ದಾರೆ.
ವಿಶ್ವ ದಾಖಲೆ
2ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ 2000 ಮತ್ತು 100 ವಿಕೆಟ್‌ಗಳ ದ್ವಿಶತಕವನ್ನು ಪೂರ್ಣಗೊಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ WTC ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಲು ಅವರಿಗೆ 79 ರನ್‌ಗಳು ಬೇಕಾಗಿದ್ದವು. ಆದರೆ ಭಾರತ ಕೇವಲ 211 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೊತ್ತಿನಲ್ಲಿ ಕ್ರೀಸ್ ಗೆ ಬಂದ ಜಡೇಜಾ ಗಿಲ್ ಜೊತೆಗೂಡಿ ದಾಖಲೆಯ ಜೊತೆಯಾಟವಾಡಿದರು. ನಾಯಕ ಶುಭ್‌ಮನ್ ಗಿಲ್ ಅವರೊಂದಿಗೆ 200 ಕ್ಕೂ ಹೆಚ್ಚು ರನ್‌ಗಳ ಅದ್ಭುತ ಜೊತೆಯಾಟವಾಡಿದರು.
WTC ಇತಿಹಾಸದಲ್ಲಿ ರವೀಂದ್ರ ಜಡೇಜಾ 41 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಮೂರು ಶತಕಗಳು ಮತ್ತು 13 ಅರ್ಧಶತಕಗಳು ಅವರ ಹೆಸರಿನಲ್ಲಿವೆ. 40 ರ ಸರಾಸರಿಯಲ್ಲಿ 2010 ರನ್‌ಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 25.92 ರ ಸರಾಸರಿಯಲ್ಲಿ 132 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪೈಕಿ ಆರು ಬಾರಿ ಐದು ವಿಕೆಟ್ ಗೊಂಚಲು ಮತ್ತು 6 ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದಾರೆ.
ಜಡೇಜಾ ಫೆವರಿಟ್ ಬರ್ಮಿಂಗ್ಹ್ಯಾಮ್
ಕುತೂಹಲಕಾರಿಯಾಗಿ, ರವೀಂದ್ರ ಜಡೇಜಾ ಈಗ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಎರಡು ದ್ವಿಶತಕದ ಜೊತೆಯಾಟವಾಡಿದ್ದಾರೆ. ಇದಕ್ಕೂ ಮೊದಲು ಅಂದರೆ 2022 ರಲ್ಲಿ ರಿಷಭ್ ಪಂತ್ ಜೊತೆ 222 ರನ್ ಪೇರಿಸಿದ್ದರು. ಈ ಬಾರಿ ಅವರು ಗಿಲ್ ಅವರೊಂದಿಗೆ 203 ರನ್‌ಗಳನ್ನು ಸೇರಿಸಿದರು. ಆದರೆ ದುರದೃಷ್ಟವಶಾತ್ ರವೀಂದ್ರ ಜಡೇಜಾ ಕೇವಲ 11 ರನ್ ಅಂತರದಲ್ಲಿ ಶತಕ ತಪ್ಪಿಸಿಕೊಂಡರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ