
ಟೆಸ್ಟ್ ಕ್ರಿಕೆಟ್‌ಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನ ಇರುತ್ತದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ- ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್ ಗೆಲುವು ಸಾಧಿಸಿದೆ. ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ನಂತರ ಮಾಜಿ ನಾಯಕ ಕೊಹ್ಲಿ ತಂಡವನ್ನು ಶ್ಲಾಘಿಸಿದ್ದಾರೆ. 58 ವರ್ಷಗಳಲ್ಲಿ ಭಾರತವು ಈ ಸ್ಥಳದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿರಲಿಲ್ಲ.
ಆದರೆ, ಶುಭಮನ್ ಗಿಲ್ ನೇತೃತ್ವದ ಯುವ ತಂಡ ಎಲ್ಲ ಅಡೆತಡೆಗಳ ವಿರುದ್ಧ ಇತಿಹಾಸ ಬರೆಯಿತು. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡ ನಂತರ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆಯಲ್ಲಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಸಮಬಲ ಸಾಧಿಸಿದೆ.
ಆದರೆ, ಶುಭಮನ್ ಗಿಲ್ ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕ ಗಳಿಸಿದರು. ಅವರು 269 ರನ್ ಗಳಿಸಿದ್ದು, ಭಾರತದ ಟೆಸ್ಟ್ ನಾಯಕನ ಅತ್ಯಧಿಕ ಸ್ಕೋರ್ ಇದಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು. ಇದು ಇಂಗ್ಲೆಂಡ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಒಬ್ಬರ ಅತ್ಯಧಿಕ ಸ್ಕೋರ್ ಕೂಡ ಆಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಗಿಲ್ 161 ರನ್ ಗಳಿಸಿದರು.
ಭಾರತ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ಕಳೆದ ತಿಂಗಳು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅದಾದ ಬಳಿಕ ಅವರ ನಾಲ್ಕನೇ ಕ್ರಮಾಂಕದಲ್ಲಿ ಗಿಲ್ ಬ್ಯಾಟಿಂಗ್ ಮಾಡಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದರು. ಭಾರತ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ ಶುಭಮನ್ ಗಿಲ್ ಅವರ ನಾಯಕತ್ವ ಮತ್ತು ಪಂದ್ಯದಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರನ್ನು ಹೊಗಳಿದರು.
'ಎಡ್ಜ್‌ಬಾಸ್ಟನ್‌ನಲ್ಲಿ ಭಾರತಕ್ಕೆ ಅದ್ಭುತ ಗೆಲುವು ಸಿಕ್ಕಿದೆ. ನಿರ್ಭೀತರಾಗಿ ಇಂಗ್ಲೆಂಡ್ ತಂಡವನ್ನು ಹಿಂದಕ್ಕೆ ತಳ್ಳುತ್ತಲೇ ಇದ್ದರು. ಶುಭಮನ್ ಗಿಲ್ ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅದ್ಭುತ ನಾಯಕತ್ವ ವಹಿಸಿದರು. ಎಲ್ಲರು ಪ್ರಭಾವಶಾಲಿ ಪ್ರದರ್ಶನ ನೀಡಿದರು. ಈ ಪಿಚ್‌ನಲ್ಲಿ ಸಿರಾಜ್ ಮತ್ತು ಆಕಾಶ್ ಬೌಲಿಂಗ್ ಮಾಡಿದ ರೀತಿಗೆ ವಿಶೇಷ ಗೌರವ' ಎಂದು ಕೊಹ್ಲಿ ಎಕ್ಸ್‌ನಲ್ಲಿ ಬರೆದಿದ್ದಾರೆ.
Advertisement