
ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿರುವಂತೆಯೇ ಇತ್ತ ಭಾರತ ತಂಡದ ನಾಯಕ ಮಾಡಿರುವ ಎಡವಟ್ಟಿನಿಂದಾಗಿ ಬಿಸಿಸಿಐಗೆ ಸಂಕಷ್ಟವೊಂದು ಎದುರಾಗಿದೆ.
ಹೌದು.. ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಾಯಕ ಶುಭ್ ಮನ್ ಗಿಲ್ ನಡೆಯಿಂದ ಬಿಸಿಸಿಐಗೆ ಬರೊಬ್ಬರಿ 250 ಕೋಟಿ ರೂ ನಷ್ಟವಾಗುವ ಭೀತಿ ಎದುರಾಗಿದೆ. ಅಲ್ಲದೆ ಬಿಸಿಸಿಐ ಕೂಡ ಕಾನೂನು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆಗಿದ್ದೇನು?
ಭಾರತದ ಎರಡನೇ ಇನ್ನಿಂಗ್ಸ್ ವೇಳೆ ಇಂಗ್ಲೆಂಡ್ ತಂಡದ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಶುಭ್ ಮನ್ ಗಿಲ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಆಟಗಾರರನ್ನು ವಾಪಸ್ ಕರೆಸಿಕೊಂಡಿದ್ದರು. ಹೀಗೆ ಡಿಕ್ಲೇರ್ ಘೋಷಣೆ ಮಾಡುವಾಗ ಶುಭ್ ಮನ್ ಗಿಲ್ ಧರಿಸಿದ್ದ ಟಿ ಶರ್ಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಶುಭಮನ್ ಗಿಲ್ ನೈಕ್ ಟೈಟ್ಸ್ ಧರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಆಗ ಭಾರತ ತಂಡ 427/6 ರನ್ ಗಳಿಸಿತು. ಅಲ್ಲದೆ ಭಾರತ ಒಟ್ಟಾರೆ 607 ರನ್ ಮುನ್ನಡೆ ಗಳಿಸಿತ್ತು.
ವಿವಾದವೇಕೆ?
ಶುಭ್ ಮನ್ ಗಿಲ್ ನೈಕ್ ಟೀಶರ್ಟ್ ಧರಿಸಿರುವುದೇ ವಿವಾದಕ್ಕೆ ಕಾರಣ ಎನ್ನಲಾಗಿದೆ. ಏಕೆಂದರೆ ಬಿಸಿಸಿಐ ಖ್ಯಾತ ಕ್ರೀಡಾ ಪರಿಕರ ತಯಾರಕ ಸಂಸ್ಥೆ ADIDAS ಜೊತೆ ಒಪ್ಪಂದ ಹೊಂದಿದ್ದು, ಅಧಿಕೃತ ಪಂದ್ಯದ ವೇಳೆ ತಂಡದ ನಾಯಕ ಗಿಲ್ ಬೇರೊಂದು ಸಂಸ್ಥೆಯ ಟಿಶರ್ಟ್ ಧರಿಸಿರುವುದು ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಅನ್ನು ಅಡಿಡಾಸ್ ಪ್ರಾಯೋಜಿಸುತ್ತಿದೆ ಮತ್ತು ಭಾರತೀಯ ಆಟಗಾರರು ಈ ಸಂಸ್ಥೆಯ ಸರಕುಗಳನ್ನು ಮಾತ್ರ ಧರಿಸುವ ನಿರೀಕ್ಷೆಯಿತ್ತು. ಆದರೆ ಗಿಲ್ ನಿಯಮಗಳನ್ನು ಪಾಲಿಸದೆ ನೈಕ್ ಟಿಶರ್ಟ್ ಧರಿಸಿ ಹೊರಬಂದರು. ಹೀಗಾಗಿ ಇದು ಒಪ್ಪಂದದ ಉಲ್ಲಂಘನೆ ಎಂದು ಹೇಳಲಾಗುತ್ತಿದೆ.
ಆತುರದಿಂದ ಒಪ್ಪಂದ ಉಲ್ಲಂಘನೆ
ಇನ್ನು ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಡ್ರೆಸಿಂಗ್ ರೂಮಿನಲ್ಲಿದ್ದಾಗಲೇ ಸಮಯ ನೋಡಿ ಸಮವಸ್ತ್ರವನ್ನೂ ಕೂಡ ಸಂಪೂರ್ಣವಾಗಿ ಧರಿಸದೇ ನೈಕ್ ಟಿಶರ್ಟ್ ನಲ್ಲಿಯೇ ಆತುರದಿಂದ ಹೊರಗೆ ಬಂದು ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಗಿಲ್ ಬಹುಶಃ ಪ್ರಾಯೋಜಕತ್ವದ ನಿಯಮಗಳು ಮತ್ತು ವಿವರಗಳನ್ನು ಮರೆತಿರಬಹುದು ಎಂದು ಊಹಿಸಲಾಗಿದೆ. ಅದಾಗ್ಯೂ ಗಿಲ್ ಖಂಡಿತವಾಗಿಯೂ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ತಮ್ಮ ಕ್ರಮಗಳನ್ನು ವಿವರಿಸುವ ಮಂಡಳಿಯಿಂದ ನೋಟಿಸ್ ಪಡೆಯಬಹುದು ಮತ್ತೆ ಕೆಲವರು ಟ್ವೀಟ್ ಮಾಡುತ್ತಿದ್ದಾರೆ.
ಅಡಿಡಾಸ್ ಬಿಸಿಸಿಐ ವಿರುದ್ಧ ಕ್ರಮ ಕೈಗೊಳ್ಳಬಹುದೇ?
2023 ರಲ್ಲಿ, ಅಡಿಡಾಸ್ ಮತ್ತು ಬಿಸಿಸಿಐ ಮಾರ್ಚ್ 2028 ರವರೆಗೆ ಜಾರಿಯಲ್ಲಿರುವ ಸುಮಾರು 250 ಕೋಟಿ ರೂ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದಾಗ್ಯೂ, ಗಿಲ್ ಅವರ ಕ್ರಮಗಳ ನಂತರ, ಅಡಿಡಾಸ್ ಭಾರತೀಯ ಮಂಡಳಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸುವ ಎಲ್ಲಾ ಹಕ್ಕುಗಳನ್ನು ಹೊಂದಿದೆ ಮತ್ತು ಅವರ ಆಟಗಾರ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸದ ಕಾರಣ ಪರಿಹಾರವನ್ನೂ ಸಹ ಕೇಳಬಹುದು.
ಮುಂದೇನು?
ಗಿಲ್ ಎಡವಟ್ಟಿನ ಹೊರತಾಗಿಯೂ ಬಿಸಿಸಿಐ ಜೊತೆಗಿನ ಸಂಬಂಧ ಹಳಸಿಕೊಳ್ಳಲು ಅಡಿಡಾಸ್ ಮುಂದಾಗುವುದಿಲ್ಲ. ಬಿಸಿಸಿಐ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದು, ಅಡಿಡಾಸ್ ಬಿಸಿಸಿಐ ಜೊತೆ ಉತ್ತಮ ಸಂಬಂಧ ಹೊಂದಿದೆ. ಇದರ ಮುಂದುವರಿಗೆ ಬಿಸಿಸಿಐಗೆ ಅಲ್ಲ ಅಡಿಡಾಸ್ ಗೇ ಮುಖ್ಯ. ಹೀಗಾಗಿ ಅಡಿಡಾಸ್ ಸಂಸ್ಥೆ ಆಟಗಾರು ಮತ್ತು ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಬಹುದು ಮತ್ತು ಒಪ್ಪಂದದಲ್ಲಿ ಹೇಳಿದಂತೆ ಪಾಲುದಾರಿಕೆಯನ್ನು ಮುಂದುವರಿಸಬಹುದು ಎಂದು ಮತ್ತೆ ಕೆಲವರು ಟ್ವೀಟ್ ಮಾಡಿದ್ದಾರೆ.
ಕಿಟ್ ಪ್ರಾಯೋಜಕರು ADDIDAS ಆಗಿದ್ದಾಗ ಗಿಲ್ ನೈಕ್ ಧರಿಸಿದ್ದೇಕೆ?
ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರು ಅಡಿಡಾಸ್ ಆಗಿದ್ದರೆ, ಶುಭ್‌ಮನ್ ಗಿಲ್ ನೈಕ್ ಧರಿಸಿದ್ದೇಕೆ? ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಯೊಬ್ಬರೂ ಇದರ ಬಗ್ಗೆ ತಮ್ಮದೇ ಆದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೂ ಉತ್ತರ ಇದ್ದು, ಮಾಧ್ಯಮ ವರದಿಗಳ ಪ್ರಕಾರ, ಶುಭ್‌ಮನ್ ಗಿಲ್ NIKE ನ ಬ್ರಾಂಡ್ ರಾಯಭಾರಿಯಾಗಿರುವುದರಿಂದ, ಅವರು ಅದರ ಕಿಟ್ ಧರಿಸುವುದರಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ ಎಂದು ಹೇಳಲಾಗಿದೆ. ಯಾವುದೇ ಆಟಗಾರನು ಈರೀತಿ ಮಾಡಿದರೆ, ಅದರಿಂದ ಯಾವುದೇ ವಿವಾದ ಆಗುವುದಿಲ್ಲ ಎನ್ನಲಾಗಿದೆ.
Advertisement