
ಭಾರತದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕ್ರಿಕೆಟ್ ಜಗತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಶ್ರೇಯಾಂಕಗಳಲ್ಲಿ ಮೇಲೇರುತ್ತಿದ್ದಾರೆ. 13 ವರ್ಷ ವಯಸ್ಸಿನ ವೈಭವ್ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 1.1 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ (RR) ತಂಡಕ್ಕೆ ಬಿಕರಿಯಾಗಿದ್ದಾಗ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಸಂಜು ಸ್ಯಾಮ್ಸನ್ ಗಾಯಗೊಂಡ ಬಳಿಕ ತಂಡದಲ್ಲಿ ಸ್ಥಾನ ಪಡೆದ 14 ವರ್ಷದ ವೈಭವ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿಕೊಂಡರು. ವೈಭವ್ 7 ಇನಿಂಗ್ಸ್‌ಗಳಲ್ಲಿ 252 ರನ್ ಗಳಿಸಿದರು ಮತ್ತು ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಕೇವಲ 35 ಎಸೆತಗಳಲ್ಲಿ ಈ ಸಾಧನೆ ಮಾಡಿದರು.
ಐಪಿಎಲ್ ಮುಗಿದ ಬಳಿಕ, ಸೂರ್ಯವಂಶಿ ಅಂಡರ್-19 ಕ್ರಿಕೆಟ್‌ನಲ್ಲಿ ತಮ್ಮ ಮೋಡಿಯನ್ನು ಮುಂದುವರೆಸಿದರು. ಇಂಗ್ಲೆಂಡ್ ವಿರುದ್ಧದ ಯೂತ್ ಏಕದಿನ ಸರಣಿಯಲ್ಲಿ 48, 45, 86, 143 ಮತ್ತು 33 ರನ್‌ಗಳೊಂದಿಗೆ ಮಿಂಚಿದರು ಮತ್ತು ನಂತರ ಅದೇ ತಂಡದ ವಿರುದ್ಧದ ಮೊದಲ ಯೂತ್ ಟೆಸ್ಟ್‌ನಲ್ಲಿ 14 ಮತ್ತು 56 ರನ್‌ಗಳನ್ನು ಗಳಿಸಿದರು.
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸೂರ್ಯವಂಶಿ ಅದ್ಭುತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಆಟಗಾರನಿಗೆ ಸಿಗುತ್ತಿರುವ ಜನಪ್ರಿಯತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಪೃಥ್ವಿ ಶಾ ಅವರಿಗೆ ಬಂದಂತಹ ಗತಿ ವೈಭವ್ ಸೂರ್ಯವಂಶಿಗೆ ಬಾರದಿರಲಿ ಎಂದು ಆಶಿಸುತ್ತಿದ್ದಾರೆ.
ಪೃಥ್ವಿ ಶಾ ಕೂಡ ಭಾರತದಲ್ಲಿ ಉದಯೋನ್ಮುಖ ಬ್ಯಾಟಿಂಗ್ ಸೆನ್ಸೇಷನ್ ಆಗಿ ಹೊರಹೊಮ್ಮಿದರು. ಆದರೆ, ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲವಾದ ನಂತರ ಕಾಲಾನಂತರದಲ್ಲಿ ತಮ್ಮ ಖ್ಯಾತಿಯನ್ನು ಕಳೆದುಕೊಂಡರು.
ಇತ್ತೀಚೆಗೆ, ಅನಂತ ಮತ್ತು ರಿವಾ ಎಂಬ ಇಬ್ಬರು ಹುಡುಗಿಯರು ಸೂರ್ಯವಂಶಿಯೊಂದಿಗೆ ಒಂದು ಫೋಟೊ ತೆಗೆಸಿಕೊಳ್ಳಳು 6 ಗಂಟೆಗಳ ಕಾಲ ಪ್ರಯಾಣಿಸಿದರು. 14 ವರ್ಷದ ಭಾರತದ ತಾರೆಯನ್ನು ಭೇಟಿಯಾದಾಗ ಇಬ್ಬರೂ ಹುಡುಗಿಯರು ರಾಜಸ್ಥಾನ ರಾಯಲ್ಸ್ ಟೀಶರ್ಟ್ ಧರಿಸಿದ್ದರು.
ಅಧಿಕೃತ ಎಕ್ಸ್ ಖಾತೆಯಲ್ಲಿ ರಾಜಸ್ಥಾನ್ ರಾಯಲ್ಸ್ ಫೋಟೊವನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ನಂಬಲಾಗದ ಅಭಿಮಾನಿ ಕಥೆಯನ್ನು ಹೈಲೈಟ್ ಮಾಡಿತು.
'ನಮಗೆ ಅತ್ಯುತ್ತಮ ಅಭಿಮಾನಿಗಳು ಇರುವುದಕ್ಕೆ ಪುರಾವೆ. ವೋರ್ಸೆಸ್ಟರ್‌ಗೆ 6 ಗಂಟೆಗಳ ಕಾಲ ಪ್ರಯಾಣ. ಗುಲಾಬಿ ಬಣ್ಣದ ಜೆರ್ಸಿ ಧರಿಸಿರುವುದು. ವೈಭವ್ ಮತ್ತು ಟೀಂ ಇಂಡಿಯಾವನ್ನು ಹುರಿದುಂಬಿಸಿದೆ. ವೈಭವ್‌ನಷ್ಟೇ ವಯಸ್ಸಾದ ಆನ್ಯಾ ಮತ್ತು ರಿವಾ ಅವರಿಗೆ ನೆನಪಿನಲ್ಲಿ ಉಳಿಯುವ ದಿನ ಇದಾಗಿತ್ತು' ಎಂದು ಬರೆದಿದೆ.
Advertisement