
ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ ನೀಡಿದ ಆಘಾತದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಚೇತರಿಸಿಕೊಂಡಿಲ್ಲ ಅದಾಗಲೇ ಮತ್ತೆ ಏಷ್ಯಾಕಪ್ ವಿಚಾರವಾಗಿ ಪಿಸಿಬಿ (Pakistan Cricket Board) ಮತ್ತೆ ಆರ್ಥಿಕ ನಷ್ಟ ಭೀತಿ ಎದುರಿಸುತ್ತಿದೆ.
ಹೌದು.. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದಂತೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಕೂಡ ಅನಿಶ್ಚಿತತೆಯಲ್ಲಿ ಸಿಲುಕಿದೆ.
ಈ ಮಹತ್ವದ ಪಂದ್ಯಾವಳಿ ರದ್ದಾದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆದಾಯಕ್ಕೆ ತೀವ್ರ ಹೊಡೆತ ಬೀಳಲಿದೆ.
ಈಗಾಗಲೇ ಅದರ ಬಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಟ್ಟುತ್ತಿದ್ದು, ಭಾನುವಾರ ನಡೆಯಬೇಕಿದ್ದ ವಿಶ್ವ ಚಾಂಪಿಯನ್ಸ್ ಲೀಗ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಿಂದ ಭಾರತೀಯ ಆಟಗಾರರು ಹಿಂದೆ ಸರಿದ ನಂತರ ಹೊಸ ಕಳವಳಗಳು ಹೆಚ್ಚುತ್ತಿವೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದಿಂದಾಗಿ ಈ ಬಾರಿ ಏಷ್ಯಾಕಪ್ ಟೂರ್ನಿ ನಡೆಯುವುದೇ ಅನುಮಾನ ಎನಿಸಿದೆ.
ಒಂದು ವೇಳೆ ಟೂರ್ನಿ ನಡೆಯದಿದ್ದರೆ ಪಾಕ್ ಕ್ರಿಕೆಟ್ ಮಂಡಳಿಗೆ ಬರೋಬ್ಬರಿ 116 ಕೋಟಿ ರು.(35 ಕೋಟಿ ಭಾರತೀಯ ರುಪಾಯಿ) ನಷ್ಟವಾಗುವಸಾಧ್ಯತೆಯಿದೆ ಎಂದು ವರದಿಯಾಗಿದೆ. ಪಾಕ್ ಮಂಡಳಿಗೆ ಐಸಿಸಿ ಹಾಗೂ ಏಷ್ಯಾಕಪ್‌ನಿಂದಲೇ ಹೆಚ್ಚಿನ ಆದಾಯ ಬರುತ್ತದೆ. ಪಿಸಿಬಿ ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಯಿಂದ ತನ್ನ ಪಾಲಿನ ಆದಾಯದಿಂದ ಸುಮಾರು 880 ಕೋಟಿ ಪಿಕೆಆರ್ ಗಳಿಸುವ ನಿರೀಕ್ಷೆಯಿತ್ತು.
ಮೂಲಗಳ ಪ್ರಕಾರ, ಈ ಬಾರಿ ಏಷ್ಯಾಕಪ್‌ನಿಂದ ಪಿಸಿಬಿಗೆ 116 ಕೋಟಿ ರು. ಲಭಿಸಲಿದೆ. ಆದರೆ ಟೂರ್ನಿ ನಡೆಯುವ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲದ ಕಾರಣ ಪಾಕ್ ಮಂಡಳಿಯು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಭೀತಿಯಲ್ಲಿದೆ.
ಇದೇ ವಿಚಾರವಾಗಿ ಮಾತನಾಡಿರುವ ಹೆಸರು ಹೇಳಲಿಚ್ಚಿಸದ ಪಿಸಿಬಿ ಅಧಿಕಾರಿಯೊಬ್ಬರು, 'ಪಿಸಿಬಿ ಈ ಹಣಕಾಸು ವರ್ಷದಲ್ಲಿ ಐಸಿಸಿಯಿಂದ ತನ್ನ ಪಾಲಿನಿಂದ $25.9 ಮಿಲಿಯನ್ (ಸುಮಾರು ಪಿಕೆಆರ್ 770 ಕೋಟಿ) ನಿರೀಕ್ಷಿಸುತ್ತಿದೆ.
ಇದಲ್ಲದೆ, ಏಷ್ಯಾ ಕಪ್‌ನಿಂದ ಪಿಕೆಆರ್ 116 ಕೋಟಿ ಮತ್ತು ಇತರ ಅಂತರರಾಷ್ಟ್ರೀಯ ಕ್ರಿಕೆಟ್ ಕಾರ್ಯಕ್ರಮಗಳ ಮೂಲಕ ಪಿಕೆಆರ್ 77 ಲಕ್ಷ ಗಳಿಸುವ ಭರವಸೆಯನ್ನು ಮಂಡಳಿ ಹೊಂದಿದೆ. ಈ ಎರಡು ಪ್ರಮುಖ ಮೂಲಗಳಿಂದ (ಐಸಿಸಿ ಮತ್ತು ಏಷ್ಯಾ ಕಪ್) ಬರುವ ಆದಾಯವು ಪಾಕಿಸ್ತಾನ ಕ್ರಿಕೆಟ್‌ನ ಆರ್ಥಿಕ ಆರೋಗ್ಯಕ್ಕೆ ಬಹಳ ಮುಖ್ಯ" ಎಂದು ತಿಳಿಸಿದ್ದಾರೆ.
ಆದಾಯಕ್ಕೆ ಕೊಳ್ಳಿ ಇಟ್ರಾ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ
ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ನಷ್ಟದ ಭೀತಿಗೆ ಸ್ವತಃ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯೇ ಕಾರಣ ಎಂದು ಹೇಳಲಾಗುತ್ತಿದೆ. ಎಸಿಸಿ ಅಧ್ಯಕ್ಷರೂ ಕೂಡ ಆಗಿರುವ ನಖ್ವಿ, ಕಳೆದ ವಾರಾಂತ್ಯದಲ್ಲಿ ಐಸಿಸಿ ಸಭೆಗಳಿಗೆ ಸಿಂಗಾಪುರಕ್ಕೆ ಪ್ರಯಾಣಿಸದ ಕಾರಣ ಏಷ್ಯಾ ಕಪ್ ಬಗ್ಗೆ ಅನಿಶ್ಚಿತತೆ ಹೆಚ್ಚಾಗಿದೆ. ಅವರು ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದರು.
ಈ ಬಾರಿಯ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ವಾರ್ಷಿಕ ಮಹಾಸಭೆಯನ್ನು ಢಾಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ್ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಹೀಗಾಗಿ ಢಾಕಾದಿಂದ ವಾರ್ಷಿಕ ಮಹಾಸಭೆಯನ್ನು ಸ್ಥಳಾಂತರಿಸಬೇಕೆಂದು ಬಿಸಿಸಿಐ ಮನವಿ ಮಾಡಿತ್ತು.
ಆದರೆ ಢಾಕಾದಲ್ಲಿ ಎಸಿಸಿ ಸಭೆ ನಡೆದರೆ ಬಿಸಿಸಿಐ ಭಾಗವಹಿಸುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಗೆ ತಿಳಿಸಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಢಾಕಾದಲ್ಲಿ ನಡೆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ನಿರ್ಣಯವನ್ನು "ಬಹಿಷ್ಕರಿಸುತ್ತದೆ" ಎಂದು ಮೂಲಗಳು ತಿಳಿಸಿವೆ.
ಸದಸ್ಯ ರಾಷ್ಟ್ರಗಳಿಂದಲೇ ವಿರೋಧ
ಬಾಂಗ್ಲಾದೇಶದಲ್ಲಿ ಪ್ರಸ್ತುತ ರಾಜಕೀಯ ಅಸ್ತಿರತೆ ಇದ್ದು, ಅಲ್ಲಲ್ಲಿ ಸಂಘರ್ಷದ ಸುದ್ದಿ ಕೇಳಿಬರುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಢಾಕಾದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಭಾರತವಲ್ಲದೆ, ಶ್ರೀಲಂಕಾ, ಒಮಾನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳು ಕೂಡ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ಆಕ್ಷೇಪಣೆಗಳ ಹೊರತಾಗಿಯೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಾರ್ಷಿಕ ಸಭೆಯನ್ನು ಬೇರೊಂದು ನಗರಕ್ಕೆ ಸ್ಥಳಾಂತರಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ತಿಳಿಸಿಲ್ಲ.
Advertisement