
ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇಡೀ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಲ್ಲಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 190 ರನ್ ಕಲೆಹಾಕಿತ್ತು.
ಅಂತೆಯೇ ಪಂಜಾಬ್ ಗೆ ಗೆಲ್ಲಲು 191 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಕೇವಲ 6 ರನ್ ಅಂತರದಲ್ಲಿ ವಿರೋಚಿತ ಗೆಲುವು ಕಂಡಿತು.
ಮುಗಿಲು ಮುಟ್ಟಿದ ಸಂಭ್ರಮ
ಇನ್ನು ಅತ್ತ ಆರ್ ಸಿಬಿ ಗೆಲುವು ಸಾಧಿಸುತ್ತಿದ್ದಂತೆಯೇ ಇತ್ತ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಆರಂಭವಾಗಿತ್ತು. ಬೆಂಗಳೂರಿನಾದ್ಯಂತ ಆರ್ ಸಿಬಿ ಅಭಿಮಾನಿಗಳು ಬೀದಿಗಳಿದು ಸಂಭ್ರಮಿಸಿದರು. ರಸ್ತೆಗಳ ತುಂಬೆಲ್ಲಾ ಜನ ಕಿಕ್ಕಿರಿದು ತುಂಬಿ ಆರ್ ಸಿಬಿ ಪರ ಘೋಷಣೆಗಳನ್ನು ಕೂಗಿದರು.
ಪ್ರಮುಖವಾಗಿ ನಗರದ ಕ್ವೀನ್ಸ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ, ಚಾಮರಾಜಪೇಟೆ, ವಿಜಯನಗರ, ಎಂಜಿ ರಸ್ತೆ, ಬ್ರಿಗೇಟ್ ರಸ್ತೆಗಳಲ್ಲಿ ಜನ ಬೀದಿಗಿಳಿದು ಸಂಭ್ರಮಿಸಿದರು.
ರಾಜ್ಯಾದ್ಯಂತ ಸಂಭ್ರಮ
ಆರ್ಸಿಬಿ ಗೆಲ್ಲುತ್ತಿದ್ದಂತೆ ಬೆಂಗಳೂರು, ತಮಕೂರು, ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಬೆಂಗಳೂರಿನ MG ರೋಡ್, ಚರ್ಚ್ಸ್ಟ್ರೀಟ್, ವಿಜಯನಗರ ಸೇರಿದಂತೆ ಹಲವು ಏರಿಯಾಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಚರ್ಚ್ಸ್ಟ್ರೀಟ್ನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನು, ಪಬ್ ಮತ್ತು ಹೋಟೆಲ್ಗಳಲ್ಲಿ ಡಿಜೆ ಸಾಂಗ್ಗೆ ಅಭಿಮಾನಿಗಳು ಸಕತ್ ಸ್ಟೆಪ್ ಹಾಕುತ್ತಿದ್ದಾರೆ. ಈ ಸಲ ಕಪ್ ನಮ್ದು, ಜೈ ಆರ್ಸಿಬಿ ಎಂದು ಘೋಷಣೆಗಳನ್ನು ಹಾಕುತ್ತಿದ್ದಾರೆ.
Advertisement