
ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐತಿಹಾಸಿಕ ಜಯ ದಾಖಲಿಸಿದ್ದು, 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಲ್ಲಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 190 ರನ್ ಕಲೆಹಾಕಿತ್ತು. ಅಂತೆಯೇ ಪಂಜಾಬ್ ಗೆ ಗೆಲ್ಲಲು 191 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಕೇವಲ 6 ರನ್ ಅಂತರದಲ್ಲಿ ವಿರೋಚಿತ ಗೆಲುವು ಕಂಡಿತು.
ಮೈದಾನದಲ್ಲೇ Virat Kohli ಕಣ್ಣೀರು
ಅಂತಿಮ ಓವರ್ ನಲ್ಲಿ ಗೆಲ್ಲಲು ಪಂಜಾಬ್ ಗೆ 29 ರನ್ ಗಳ ಅಗತ್ಯವಿದ್ದಾಗ ಪಂಜಾಬ್ ತಂಡ 22 ರನ್ ಗಳನ್ನು ಮಾತ್ರ ಗಳಿಸಿತು. ಅಂತಿಮ ಎಸೆತದಲ್ಲಿ ಗೆಲ್ಲಲು 12ರನ್ ಬೇಕಿದ್ದಾಗ ಶಶಾಂಕ್ ಸಿಂಗ್ ಸಿಕ್ಸರ್ ಸಿಡಿಸಿದರಾದರೂ 6 ರನ್ ಗಳ ಅಂತರದಲ್ಲಿ ಆರ್ ಸಿಬಿ ವಿರೋಚಿತ ಗೆಲುವು ಸಾಧಿಸಿತು.
ಇತ್ತ ಗೆಲುವು ಖಚಿತವಾಗುತ್ತಿದ್ದಂತೆಯೇ ಮೈದಾನದಲ್ಲಿ ವಿರಾಟ್ ಕೊಹ್ಲಿ ಭಾವುಕರಾದರು. ಒಂದೆಡೆ ಇಡೀ ತಂಡ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರೆ ವಿರಾಟ್ ಕೊಹ್ಲಿ ಮಾತ್ರ ಕಣ್ತುಂಬಿಕೊಂಡಿದ್ದರು.
ಈ ವೇಳೆ ನಾಯಕ ರಜತ್ ಪಟಿದಾರ್, ಜಿತೇಶ್ ಶರ್ಮಾ, ಫಿಲ್ ಸಾಲ್ಟ್ ಸೇರಿದಂತೆ ತಂಡದ ಇತರೆ ಆಟಗಾರರು ವಿರಾಟ್ ಕೊಹ್ಲಿಯನ್ನು ಸಂತೈಸಿದರು.
Advertisement