
ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಫೈನಲ್ ಪಂದ್ಯ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಬಳಿ ಓಡಿ ಹೋಗಿ ಬಿಗಿದಪ್ಪಿಕೊಂಡರು.
ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಲ್ಲಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 190 ರನ್ ಕಲೆಹಾಕಿತ್ತು. ಅಂತೆಯೇ ಪಂಜಾಬ್ ಗೆ ಗೆಲ್ಲಲು 191 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು.
ಆ ಮೂಲಕ ಕೇವಲ 6 ರನ್ ಅಂತರದಲ್ಲಿ ವಿರೋಚಿತ ಗೆಲುವು ಕಂಡಿತು. ಈ ಮೂಲಕ ಐಪಿಎಲ್ ಟೂರ್ನಿ ಆರಂಭವಾದ 18 ವರ್ಷಗಳ ಬಳಿಕ ಆರ್ ಸಿಬಿ ಚಾಂಪಿಯನ್ ಪಟ್ಟಕ್ಕೇರಿದೆ.
ಪಂದ್ಯ ಮುಕ್ತಾಯವಾಗುತ್ತಲೇ ಎಬಿಡಿ ಬಳಿ ಓಡಿ ಬಿಗಿದಬ್ಬಿದ ಕೊಹ್ಲಿ
ಇನ್ನು ಈ ಫೈನಲ್ ಪಂದ್ಯ ಮುಕ್ತಾಯವಾಗುತ್ತಲೇ ವಿರಾಟ್ ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿಡಿ ಬೌಂಡರಿ ಲೈನ್ ನಿಂದ ಹಾರಿ ಮೈದಾನದ ಒಳಗೆ ನುಗ್ಗಿದರೆ.. ಇತ್ತ ಕೊಹ್ಲಿ ಕೂಡ ಎಬಿಡಿ ಇದ್ದ ಸ್ಥಳದತ್ತ ಓಡಿದರು. ಇಬ್ಬರೂ ಆಟಗಾರರು ಪರಸ್ಪರ ಬಿಗಿದಪ್ಪಿ ಗೆಲುವನ್ನು ಭಾವುಕರಾಗಿ ಸಂಭ್ರಮಿಸಿದರು.
ಒಂದೆಡೆ ವಿರಾಟ್ ಕೊಹ್ಲಿ ಕಣ್ಣೀರು ಹಾಕಿದರೆ, ಕೊಹ್ಲಿಯನ್ನು ನೋಡಿದ ಎಬಿಡಿ ಕೂಡ ಕೊಂಚ ಭಾವುಕರಾದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಇದೇ ವೇಳೆ ಉಭಯ ಆಟಗಾರರು ಐಪಿಎಲ್ ನಲ್ಲಿ ತಾವು ಪ್ರಶಸ್ತಿಗಾಗಿ ಪಟ್ಟ ಕಷ್ಟವನ್ನು ಮೆಲುಕು ಹಾಕಿದರು. ಈ ಇಬ್ಬರು ಆರ್‌ಸಿಬಿ ಶ್ರೇಷ್ಠ ಆಟಗಾರರ ನಡುವಿನ ಅಪ್ಪುಗೆಯು ವರ್ಷಗಳ ಕಾಲ ಫ್ರಾಂಚೈಸಿಯನ್ನು ಮುನ್ನಡೆಸಿದ್ದ ಮೈದಾನದಲ್ಲಿದ್ದ ಅಭಿಮಾನಿಗಳು ಸ್ಮರಿಸಿದರು.
'ಈ ಸಲ ಕಪ್ ನಮ್ದು'... ಸಾಥ್ ಕೊಟ್ಟ Chris Gayle
ಅತ್ತ ಕೊಹ್ಲಿ ಮತ್ತು ಎಬಿಡಿ ಒಂದಾಗುತ್ತಲೇ ಇತ್ತ ಕ್ರಿಸ್ ಗೇಯ್ಲ್ ಕೂಡ ಪಾರ್ಟಿಗೆ ಜಾಯ್ನ್ ಆದರು. ಮೂರೂ ಆಟಗಾರರು ಆರ್ ಸಿಬಿ ಜೆರ್ಸಿ ಧರಿಸಿ ಈ ಸಲ ಕಪ್ ನಮ್ದೇ.. ಅಲ್ಲ.. ಈ ಸಲ ಕಪ್ ನಮ್ದು ಎಂದು ಒಂದೇ ಬಾರಿಗೆ ಒಟ್ಟಿಗೆ ಕೂಗಿ ಹೇಳಿದರು.
ಹಾಲಿ ಐಪಿಎಲ್ ಟೂರ್ನಿ ಆರಂಭದ ವೇಳೆ ಕೊಹ್ಲಿ ಎಬಿಡಿ ಜೊತೆ ಇದೇ ವಿಚಾರವಾಗಿ ಜಗಳ ಮಾಡಿದ್ದರು. ಆರ್ ಸಿಬಿ ಕಪ್ ಗೆಲ್ಲುವವರೆಗೂ 'ಈ ಸಲ ಕಪ್ ನಮ್ದೇ..' ಸಾಲನ್ನು ಹೇಳಬಾರದು ಎಂದು ತಾಕೀತು ಮಾಡಿದ್ದರಂತೆ. ಹೀಗಾಗಿ ಇಂದು ಎಬಿಡಿ ನೇರವಾಗಿ ಇಂದು ನರೇಂದ್ರ ಮೋದಿ ಕ್ರೀಡಾಂಗಣಕ್ಕೇ ಆಗಮಿಸಿ ಸ್ವತಃ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಯ್ಲ್ ಜೊತೆ ಈ ಸಲ ಕಪ್ ನಮ್ದು ಎಂದು ಹೇಳಿದ್ದಾರೆ.
ಆ ಮೂಲಕ ಈ ಮೂವರು ಲೆಜೆಂಡ್ ಆಟಗಾರರು ತಮ್ಮ ವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.
Advertisement