
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಂಜಾಬ್ ಕಿಂಗ್ಸ್ ತಂಡದಿಂದ ಸ್ಫೋಟಕ ಆಲ್ರೌಂಡರ್ ಶಶಾಂಕ್ ಸಿಂಗ್ ಕೈ ಬಿಡುವ ಕುರಿತು ಚರ್ಚೆಗಳು ಆರಂಭವಾಗಿದೆ.
ಹೌದು.. ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಪ್ರಶಸ್ತಿಗಾಗಿ ಹೈವೋಲ್ಟೇಜ್ ಕದನ ನಡೆಯಲಿದ್ದು, ಈಗಾಗಲೇ ಮೊದಲ ಕ್ವಾಲಿಫೈಯರ್ ನಲ್ಲಿ ಆರ್ ಸಿಬಿ ವಿರುದ್ಧ ಸೋತಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಫೈನಲ್ ನಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇತ್ತ ಆರ್ ಸಿಬಿ ಕೂಡ ತನ್ನ ಕಳೆದ 18 ವರ್ಷಗಳ ಪ್ರಶಸ್ತಿ ಹಸಿವು ನೀಗಿಸಿಕೊಳ್ಳಲು ಎದುರು ನೋಡುತ್ತಿದೆ.
ಶಶಾಂಕ್ ಸಿಂಗ್ ವಿರುದ್ಧ ಅಯ್ಯರ್ ಆಕ್ರೋಶ, ಫೈನಲ್ ಪಂದ್ಯಕ್ಕೆ ಡೌಟ್
ಇನ್ನು ಇಂದು ನಡೆಲಿರುವ ಆರ್ ಸಿಬಿ ವಿರುದ್ಧದ ಫೈನಲ್ ಪಂದ್ಯದಿಂದ ಪಂಜಾಬ್ ತಂಡದ ಆಲ್ರೌಂಡರ್ ಶಶಾಂಕ್ ಸಿಂಗ್ ರನ್ನು ಕೈಬಿಡುವ ಕುರಿತು ಚರ್ಚೆಗಳು ನಡೆದಿದ್ದು, ಇದಕ್ಕೆ ಈ ಹಿಂದಿನ ಪಂದ್ಯದಲ್ಲಿ ಶಶಾಂಕ್ ಸಿಂಗ್ ಮಾಡಿದ್ದ ಎಡವಟ್ಟು ಕಾರಣ ಎನ್ನಲಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶಶಾಂಕ್ ಸಿಂಗ್ ಮಾಡಿದ್ದ ಪ್ರಮಾದ ನಾಯಕ ಶ್ರೇಯಸ್ ಅಯ್ಯರ್ ಕೋಪಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಅಯ್ಯರ್ ಶಶಾಂಕ್ ಸಿಂಗ್ ರನ್ನು ಫೈನಲ್ ಪಂದ್ಯದಿಂದ ಕೈ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುಖ ತೋರಿಸ್ಬೇಡ ನೀನು.. ಎಂದಿದ್ದ ಅಯ್ಯರ್
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ನೀಡಿದ್ದ 204 ರನ್ ಗಳ ಗುರಿಯನ್ನು ಪಂಜಾಬ್ ತಂಡ ನಾಯಕ್ ಶ್ರೇಯಸ್ ಅಯ್ಯರ್ (ಅಜೇಯ 87 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 5 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಪಂಜಾಬ್ ತಂಡ ಒಂದು ಸಣ್ಣ ತಪ್ಪು ಮಾಡಿದ್ದರೂ ಪಂದ್ಯವೇ ಕೈ ತಪ್ಪುವ ಅಪಾಯವಿತ್ತು.
ಇದೇ ಕಾರಣಕ್ಕೆ ಶಶಾಂಕ್ ಸಿಂಗ್ ವಿರುದ್ಧ ಶ್ರೇಯಸ್ ಅಯ್ಯರ್ ಕೋಪಗೊಂಡಿದ್ದು, ಪಂದ್ಯ ಮುಕ್ತಾಯದ ಬಳಿಕ ನಡೆದ ಉಭಯ ತಂಡಗಳ ಹಸ್ತಲಾಘವ ವೇಳೆ ಶಶಾಂಕ್ ಸಿಂಗ್ ಎದುರಾಗುತ್ತಲೇ ಶ್ರೇಯಸ್ ಅಯ್ಯರ್ ತೀವ್ರ ಆಕ್ರೋಶ ಗೊಂಡು.. 'ಬಾಯಿಗೆ ಬಂದಂತೆ ಬೈದಿದ್ದು ಮಾತ್ರವಲ್ಲದೇ ಮುಖ ತೋರಿಸಬೇಡ ನೀನು ಎಂದು ಆಕ್ರೋಶಭರಿತರಾಗಿ ಹೇಳಿದರು. ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮುಂಬೈನ ಅಶ್ವನಿ ಕುಮಾರ್ ಬೌಲಿಂಗ್‌ನಲ್ಲಿ ಶ್ರೇಯಸ್ ಅಯ್ಯರ್ ಗೆಲುವಿನ ಸಿಕ್ಸರ್ ಬಾರಿಸಿದ ನಂತರ, ಇಡೀ ಪಂಜಾಬ್ ಕಿಂಗ್ಸ್ ಆಟಗಾರರು ನಾಯಕನನ್ನು ಅಪ್ಪಿಕೊಂಡು ಸಂಭ್ರಮಿಸುತ್ತಿದ್ದರು.ಆದರೆ, ಶಶಾಂಕ್ ಸಿಂಗ್ ಶ್ರೇಯಸ್ ಅಯ್ಯರ್ ಬಳಿಗೆ ಬಂದಾಗ, ಅಯ್ಯರ್ ಶಶಾಂಕ್ಗೆ ಅವಾಚ್ಯ ಶಬ್ದಗಳಿಂದ ಬೈದು, ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಿರ್ಣಾಯಕ ಹಂತದಲ್ಲಿ ಶಶಾಂಕ್ ಸಿಂಗ್ ಅನಗತ್ಯವಾಗಿ ರನೌಟ್ ಗೆ ಬಲಿಯಾಗಿದ್ದರು. ಪಂಜಾಬ್ ಇನ್ನಿಂಗ್ಸ್ ನ 17 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕೇವಲ 2 ರನ್‌ಗಳಿಗೆ ರನೌಟ್ ಆದ ನಂತರ ಶಶಾಂಕ್ ಸಿಂಗ್ ಡಗೌಟ್‌ಗೆ ಹಿಂತಿರುಗಿದರು. ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ಶಶಾಂಕ್ ಸಿಂಗ್ ಮಿಡ್-ಆನ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರತ್ತ ಲೋ ಫುಲ್-ಟಾಸ್ ವೈಡ್ ಅನ್ನು ಹೊಡೆದು ಸಿಂಗಲ್ ರನ್ ಕದಿಯಲು ಮುಂದಾದರು.
ಈ ವೇಳೆ ಚೆಂಡನ್ನು ಹಿಡಿತಕ್ಕೆ ಪಡೆದ ಹಾರ್ದಿಕ್ ಪಾಂಡ್ಯಾ ನೇರವಾಗಿ ವಿಕೆಟ್ ನತ್ತ ಚೆಂಡನ್ನು ಎಸೆದು ಬೇಲ್ಸ್ ಎಗರಿಸಿದರು. ಆದರೆ ಶಶಾಂಕ್ ನಾನ್-ಸ್ಟ್ರೈಕರ್‌ನ ಎಸೆತವನ್ನು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಅಲ್ಲದೆ ಹಾರ್ದಿಕ್ ಪಾಂಡ್ಯ ಕ್ರಿಸ್ಗೆ ಎಸೆದ ಬಾಲ್ಗೆ ಔಟ್ ಆಗಿದ್ದರು.
ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಶಶಾಂಕ್ ಸಿಂಗ್ ಮಾಡಿದ ಈ ಎಡವಟ್ಟು ನಾಯಕ ಅಯ್ಯರ್ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಪಂದ್ಯ ಮುಕ್ತಾಯದ ಬಳಿಕ ಶಶಾಂಕ್ ಕಡೆಗೆ ಬೆರಳುಗಳನ್ನು ತೋರಿಸಿ ತಮ್ಮ ಅಸಮಾಧಾನವನ್ನು ತೋರಿಸಿದರು.
Advertisement