
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದಾಗ ಅವರ ಸ್ಥಾನ ತುಂಬುವವರು ಯಾರೆಂಬುವ ಪ್ರಶ್ನೆ ವ್ಯಾಪಕವಾಗಿ ಕೇಳಿಬಂದಿತ್ತು. ಈ ಬೆನ್ನಲ್ಲೇ ಇಂಗ್ಲೆಂಡ್ ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸಲಾಯಿತು. 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಸ್ಥಿರತೆಯನ್ನು ತಂದುಕೊಟ್ಟಿದ್ದರು. ಈಗ ಕೊಹ್ಲಿ ನಿವೃತ್ತರಾಗಿದ್ದು, ಯುವ ಆಟಗಾರರು ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಮಯ ಬಂದಿದೆ. ವರದಿಗಳ ಪ್ರಕಾರ, ಶುಭಮನ್ ಗಿಲ್ ಇಂಗ್ಲೆಂಡ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕ ಆಟಗಾರರಾಗಿದ್ದಾರೆ. ಚೊಚ್ಚಲ ಆಟಗಾರ ಸಾಯಿ ಸುದರ್ಶನ್ 3ನೇ ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು.
ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್, ಸಾಯಿ ಸುದರ್ಶನ್ ಅವರನ್ನು 'ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗಲಿದ್ದಾರೆ ಮತ್ತು ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ನಿರ್ವಹಿಸಿದ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ.
'ಈಗ ತಂಡದಲ್ಲಿ ಕೆಲವು ಒಳ್ಳೆಯ ಯುವ ಆಟಗಾರರಿದ್ದಾರೆ. ಅವರಲ್ಲಿ ಒಬ್ಬರು ಸಾಯಿ ಸುದರ್ಶನ್. ಇವರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಕ್ಲಬ್ ಆಗಿರುವ ಸರ್ರೆ ಪರ ಉತ್ತಮವಾಗಿ ಆಡಿದ್ದಾರೆ. ತುಂಬಾ ಆಕ್ರಮಣಕಾರಿ ಮತ್ತು ನಿರ್ಭೀತರಾಗಿ ಕಾಣುತ್ತಾರೆ. ಅವರು ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗಬಹುದು ಮತ್ತು ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಮಾಡಿದ ಪಾತ್ರವನ್ನು ವಹಿಸಬಹುದು ಎಂದು ನಾನು ಭಾವಿಸುತ್ತೇನೆ' ಎಂದು ಪನೇಸರ್ ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿದರು.
'ವಿರಾಟ್ ಕೊಹ್ಲಿ ಅವರ ಪರಂಪರೆಯನ್ನು ಮುಂದುವರಿಸುವುದು ನಾನು ಮಾಡಲು ಬಯಸುವ ಒಂದು ವಿಷಯ. ಅವರು ಟೆಸ್ಟ್ ಕ್ರಿಕೆಟ್ ಆಡಿದ ರೀತಿ, ಯುವ ಭಾರತೀಯ ಟೆಸ್ಟ್ ಆಟಗಾರರು ಹಾಗೆ ಆಡುವುದನ್ನು ನಾನು ನೋಡಲು ಬಯಸುತ್ತೇನೆ' ಎಂದು ಹೇಳಿದರು.
ಸಾಯಿ ಸುದರ್ಶನ್ 2023 ರಲ್ಲಿ ಕೌಂಟಿ ತಂಡ ಸರ್ರೆ ಪರ ಆಡಿದ್ದರು ಮತ್ತು ಅಲೆಕ್ ಸ್ಟೀವರ್ಟ್ ಅವರಿಂದ ತಮ್ಮ ಕ್ಯಾಪ್ ಪಡೆದರು.
ಇದಕ್ಕೂ ಮೊದಲು, ಜೂನ್ 13 ರಂದು ಪ್ರಾರಂಭವಾಗುವ ಭಾರತದ ಇಂಟ್ರಾ-ಸ್ಕ್ವಾಡ್ ಪಂದ್ಯದ ನಂತರ ತಂಡದ ಆಡಳಿತ ಮಂಡಳಿಯು ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭಾರತದ ಹೊಸ ನಾಯಕ ಶುಭಮನ್ ಗಿಲ್ ಸುಳಿವು ನೀಡಿದ್ದಾರೆ.
'ನಾವು ಇನ್ನೂ ನಿರ್ಧರಿಸಿಲ್ಲ... ನಮಗೆ ಇನ್ನೂ ಸ್ವಲ್ಪ ಸಮಯವಿದೆ. ನಾವು ಇಂಟ್ರಾ ಸ್ಕ್ವಾಡ್ ಪಂದ್ಯವನ್ನು ಆಡುತ್ತೇವೆ ಮತ್ತು ಲಂಡನ್‌ನಲ್ಲಿ 10 ದಿನಗಳ ಶಿಬಿರವನ್ನು ನಡೆಸುತ್ತೇವೆ. ಆದ್ದರಿಂದ ನಮಗೆ ಇನ್ನೂ ಸ್ವಲ್ಪ ಸಮಯವಿದೆ. ನಾವು ಅಲ್ಲಿಗೆ ಹೋದ ನಂತರ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಬಹುದು ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.
Advertisement