
ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಫ್ ಫೈನಲ್ ಪಂದ್ಯದಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಟಗಾರರು 3ನೇ ದಿನ ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಭಾರತದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನ ಸಂತ್ರಸ್ಥರಿಗೆ ಸಂತಾಪ ಸೂಚಿಸಿದರು.
ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಫೈನಲ್ ಪಂದ್ಯ ನಿರ್ಣಾಯಕ ಘಟ್ಟದತ್ತ ಸಾಗಿರುವಂತೆಯೇ 3ನೇ ದಿನದಾಟದ ವೇಳೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಟಗಾರರು ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಣಕ್ಕೆ ಇಳಿಯುವ ಮೂಲಕ ಭಾರತದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನ ಸಂತ್ರಸ್ಥರಿಗೆ ಸಂತಾಪ ಸೂಚಿಸಿದರು.
ನಿನ್ನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರ ಸಹಿತ 241 ಮಂದಿ ಸಾವಿಗೀಡಾಗಿದ್ದರು.
ದಕ್ಷಿಣ ಆಫ್ರಿಕಾಗೆ ಸವಾಲಿನ ಗುರಿ
ಇನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಫ್ ಫೈನಲ್ ಪಂದ್ಯ ಅಂತಿಮ ಘಟ್ಟ ತಲುಪಿದ್ದು, ದಕ್ಷಿಣ ಆಫ್ರಿಕಾಗೆ ಗೆಲ್ಲಲು ಆಸ್ಟ್ರೇಲಿಯಾ ತಂಡ 282 ರನ್ ಗಳ ಸವಾಲಿನ ಗುರಿ ನೀಡಿದೆ. 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡ 207 ಆಲೌಟ್ ಆಯಿತು.
ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಶೇನ್ 22 ರನ್ ಗಳಿಸಿದರೆ, ಅಲೆಕ್ಸ್ ಕರ್ರೆ 43 ರನ್ ಮತ್ತು ಮಿಚೆಲ್ ಸ್ಟಾರ್ಕ್ ಅಜೇಯ 58 ರನ್ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 65 ಓವರ್ ನಲ್ಲಿ 207 ರನ್ ಗೇ ಆಲೌಟ್ ಆಗಿ ದಕ್ಷಿಣ ಆಫ್ರಿಕಾಗೆ ಗೆಲ್ಲಲು 282 ರನ್ ಗಳ ಸವಾಲಿನ ಗುರಿ ನೀಡಿದೆ.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡಾ 4 ವಿಕೆಟ್ ಪಡೆದರೆ, ಲುಂಗಿ ಎನ್ಗಿಡಿ 3 ವಿಕೆಟ್ ಪಡೆದರು. ಉಳಿದಂತೆ ಐಡೆನ್ ಮರ್ಕ್ರಾಮ್, ವಿಯಾನ್ ಮುಲ್ಡರ್, ಮಾರ್ಕೋ ಜೇನ್ಸನ್ ತಲಾ 1 ವಿಕೆಟ್ ಪಡೆದರು.
ಚೊಚ್ಚಲ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ದಕ್ಷಿಣ ಆಫ್ರಿಕಾ ಕಾತುರ
ಇನ್ನು ಐಸಿಸಿ ಇವೆಂಟ್ ಗಳಲ್ಲಿ ದಕ್ಷಿಣ ಆಫ್ರಿಕಾ ಸಾಕಷ್ಟು ಬಾರಿ ಪ್ರಶಸ್ತಿಗೆ ಹತ್ತಿರವಾಗಿತ್ತಾದರೂ ಅಂತಿಮ ಹಂತದಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದರು. ಇದೀಗ ಮತ್ತೆ ಪ್ರಶಸ್ತಿಗೆ ಹತ್ತಿರಾಗಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ 5 ಬಾರಿ 250ಕ್ಕೂ ಹೆಚ್ಚು ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿದೆ. ಈ ಪೈಕಿ 3 ಬಾರಿ ಆಸ್ಟ್ರೇಲಿಯಾ ವಿರುದ್ಧವೇ ಬಂದಿದೆ.
Advertisement