ಆಸ್ಟ್ರೇಲಿಯಾಗೆ ಆಘಾತ; ಡಬ್ಲ್ಯುಟಿಸಿ ಫೈನಲ್‌ನಿಂದ ಹೊರಬಿದ್ದ ಸ್ಟೀವ್ ಸ್ಮಿತ್!
ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಡಬ್ಲ್ಯುಟಿಸಿ) ಪಂದ್ಯದ 3ನೇ ದಿನದಂದು ಸ್ಟೀವ್ ಸ್ಮಿತ್ ಬೆರಳಿನ ಮೂಳೆ ಪಲ್ಲಟಗೊಂಡು ಮೈದಾನದಿಂದ ಹೊರನಡೆದಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಎರಡನೇ ಸೆಷನ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ಸ್ಮಿತ್, ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅವರ ಹೊಡೆತದಲ್ಲಿ ಕ್ಯಾಚ್‌ಗೆ ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿತು.
ಆ ಸಮಯದಲ್ಲಿ ಕೇವಲ ಎರಡು ರನ್ ಗಳಿಸಿದ್ದ ಬವುಮಾ, ಶಾರ್ಟ್ ಎಸೆತವನ್ನು ಟಾಪ್-ಎಡ್ಜ್ ಮಾಡಿದರು. ಆದರೆ, ಸ್ಮಿತ್ ಆ ಅವಕಾಶವನ್ನು ಕೈಚೆಲ್ಲಿದರು ಮಾತ್ರವಲ್ಲದೆ, ಅವರ ಬಲಗೈ ಬೆರಳಿಗೂ ಗಾಯವಾಯಿತು. ಬಳಿಕ ಬವುಮಾ ಆಸ್ಟ್ರೇಲಿಯಾಕ್ಕೆ ದುಬಾರಿಯಾಗಿ ಪರಿಣಮಿಸಿದರು. ಬವುಮಾ ಮತ್ತು ಐಡೆನ್ ಮಾರ್ಕ್ರಾಮ್ ಅವರು 143* ರನ್‌ಗಳ ಜೊತೆಯಾಟವಾಡಿದ್ದು, ದಕ್ಷಿಣ ಆಫ್ರಿಕಾವನ್ನು ತಮ್ಮ ಚೊಚ್ಚಲ ಐಸಿಸಿ ಟ್ರೋಫಿಗೆ (27 ವರ್ಷಗಳಲ್ಲಿ) ಹತ್ತಿರವಾಗಿಸಿದ್ದಾರೆ.
36 ವರ್ಷದ ಆಟಗಾರ ತಕ್ಷಣವೇ ಮೈದಾನವನ್ನು ತೊರೆದರು ಮತ್ತು ಉಳಿದ ಅವಧಿಗೆ ಹಿಂತಿರುಗಲಿಲ್ಲ. ನಂತರ, ಕ್ರಿಕೆಟ್ ಆಸ್ಟ್ರೇಲಿಯಾ (CA) ಸ್ಮಿತ್ ಅವರು ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ. ಸ್ಕ್ಯಾನ್‌ಗಳು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿದೆ ಎಂದು ದೃಢಪಡಿಸಿತು. 4ನೇ ದಿನದಂದು ಅವರ ಲಭ್ಯತೆ ತುಂಬಾ ಅಸಂಭವವಾಗಿದೆ.
'ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಐಸಿಸಿ ಪುರುಷರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸ್ಲಿಪ್ ಕಾರ್ಡನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಸ್ಟೀವ್ ಸ್ಮಿತ್ ಅವರ ಬಲಗೈ ಕಿರುಬೆರಳಿಗೆ ಗಾಯವಾಗಿದೆ. ಆಸ್ಟ್ರೇಲಿಯನ್ ತಂಡದ ವೈದ್ಯಕೀಯ ಸಿಬ್ಬಂದಿ ಅವರನ್ನು ಮೈದಾನದಲ್ಲಿಯೇ ಪರೀಕ್ಷಿಸಿದರು ಮತ್ತು ಎಕ್ಸ್-ರೇ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು' ಎಂದು ಆಸ್ಟ್ರೇಲಿಯಾ ದೃಢಪಡಿಸಿದೆ.
ಗಾಯವಾಗುವ ಮೊದಲು, ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ 112 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದರು. ಆರಂಭಿಕ ವಿಕೆಟ್‌ಗಳು ಪತನಗೊಂಡ ನಂತರ ಆಸ್ಟ್ರೇಲಿಯಾವನ್ನು ಸ್ಪರ್ಧೆಯಲ್ಲಿ ಉಳಿಸಿಕೊಂಡರು. ಐಡೆನ್ ಮಾರ್ಕ್ರಾಮ್ ಅವರು ಅಜೇಯ ಶತಕ ಗಳಿಸಿದ್ದು, ದಕ್ಷಿಣ ಆಫ್ರಿಕಾ ದೊಡ್ಡ ಇತಿಹಾಸ ಬರೆಯಲು ಕೇವಲ 69 ರನ್‌ಗಳ ದೂರದಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ