
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ತಂಡದ ಭಾಗವಾಗಿಲ್ಲದ ಭಾರತದ ವೇಗಿ ಮುಖೇಶ್ ಕುಮಾರ್, ಜೂನ್ 20ರಿಂದ ಲೀಡ್ಸ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಸರಣಿಗೂ ಮುನ್ನ, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖೇಶ್ ಕುಮಾರ್ ಆಡಿದ್ದರು. ಅಲ್ಲಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಆದಾಗ್ಯೂ, ನಾರ್ಥಾಂಪ್ಟನ್‌ನಲ್ಲಿ ನಡೆದ ಎರಡನೇ ಪಂದ್ಯಕ್ಕೆ ಅವರನ್ನು ತಂಡದಿಂದ ಕೈಬಿಡಲಾಯಿತು. ಕಳೆದ ವಾರ ಕೆಂಟ್‌ನಲ್ಲಿ ನಡೆದ ಇಂಟ್ರಾ-ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲೂ ಅವರು ತಂಡದಿಂದ ಹೊರಗುಳಿದಿದ್ದರು.
ಹೆಡಿಂಗ್ಲಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲು ಕೇವಲ ಎರಡು ದಿನಗಳು ಬಾಕಿ ಇದ್ದು, ಮುಖೇಶ್ ಇನ್‌ಸ್ಟಾಗ್ರಾಂನಲ್ಲಿ 'ಕರ್ಮ ತನ್ನ ಸಮಯವನ್ನು ಕಾಯುತ್ತದೆ. ನೀವು ಯಾವಾಗಲೂ ಜಾಗರೂಕರಾಗಿರಬೇಕು. ಕರ್ಮ ಕ್ಷಮಿಸುವುದಿಲ್ಲ ಮತ್ತು ಯಾವಾಗಲೂ ಪ್ರತೀಕಾರವನ್ನು ತೀರಿಸಿಕೊಳ್ಳುತ್ತದೆ' ಎಂದು ಬರೆದಿದ್ದಾರೆ.
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ, ಐದು ಪಂದ್ಯಗಳ ಸರಣಿಗೆ ಟೀಂ ಇಂಡಿಯಾ ತಂಡದಲ್ಲಿ ವೇಗಿ ಹರ್ಷಿತ್ ರಾಣಾ ಅವರಿಗೆ ಅವಕಾಶ ನೀಡಲಾದ ಒಂದು ದಿನದ ನಂತರ ಮುಖೇಶ್ ಅವರು ಈ ಪೋಸ್ಟ್ ಮಾಡಿದ್ದಾರೆ.
ಭಾರತ ಎ ತಂಡದ ಭಾಗವಾಗಿದ್ದ ರಾಣಾ, ಹೆಡಿಂಗ್ಲಿಯಲ್ಲಿ ನಡೆಯಲಿರುವ ಸರಣಿಯ ಆರಂಭಿಕ ಪಂದ್ಯಕ್ಕೆ ಭಾರತ ತಂಡದಲ್ಲಿ ಆಡಲು ಸಜ್ಜಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿರುವುದಾಗಿ ಐಸಿಸಿ ತಿಳಿಸಿದೆ.
2024ರ ನವೆಂಬರ್‌ನಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ರಾಣಾ ಚೊಚ್ಚಲ ಪಂದ್ಯವನ್ನಾಡಿದರು ಮತ್ತು ಪರ್ತ್‌ನಲ್ಲಿ ನಡೆದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಭಾರತದ 295 ರನ್ ಅಂತರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
23 ವರ್ಷದ ರಾಣಾ ಕ್ಯಾಂಟರ್ಬರಿಯಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ಭಾಗವಾಗಿದ್ದರು. ರಾಣಾ ಪಂದ್ಯವನ್ನು ಒಂದು ವಿಕೆಟ್ ಪಡೆಯುವ ಮೂಲಕ ಮುಗಿಸಿದರು ಮತ್ತು ಇಂಗ್ಲೆಂಡ್ ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು.
ರಾಣಾ ಅವರು ಐದು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 20.70 ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಇಂಗ್ಲೆಂಡ್ ವಿರುದ್ಧದ ಏಕೈಕ T20I ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ವರ್ಷ ಭಾರತದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದರು.
Advertisement