
ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಅರ್ಧಶತಕ ಬಾರಿಸಿದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಶ್ಲಾಘಿಸಿದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ವೇಳೆ ಬೇಡದ ಹೊಡೆತ ಹೊಡೆಯಲು ಹೋಗಿ ವಿಕೆಟ್ ಒಪ್ಪಿಸಿದ್ದ ಪಂತ್ ಅವರನ್ನು ಸುನೀಲ್ ಗವಾಸ್ಕರ್ ಅವರು ಕಾಮೆಂಟ್ರಿ ಮಾಡುವ ವೇಳೆ 'ಸ್ಟುಪಿಡ್ ಸ್ಟುಪಿಡ್ ಸ್ಟುಪಿಡ್' ಎಂದು ಬೈದಿದ್ದರು. ಆದರೆ, ಇದೀಗ ಶುಕ್ರವಾರ ಲೀಡ್ಸ್‌ನಲ್ಲಿ ಪಂತ್ ಅವರ ಬ್ಯಾಟಿಂಗ್ ವೈಖರಿಗೆ ಗವಾಸ್ಕರ್ ಮೆಚ್ಚುಗೆ ಸೂಚಿಸಿದ್ದಾರೆ.
ಸೋನಿ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಗವಾಸ್ಕರ್, ಪಂತ್ ಅವರು ತಮ್ಮ ಫೂಟ್ ಬಳಸಿ ಎರಡನೇ ಅಥವಾ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಲೀಡ್ಸ್‌ನಲ್ಲಿ ಬೌಲರ್‌ಗಳು ಸುಸ್ತಾದಾಗ ಅವರನ್ನು ಎದುರಿಸಲು ಮತ್ತು ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಸಮಯ ನೀಡಿ ಆಡುವ ಮೂಲಕ ಪಂತ್ ಉತ್ತಮ ವಿಧಾನವನ್ನು ಅಳವಡಿಸಿಕೊಂಡರು ಎಂದರು.
'ಅವರು ಉತ್ತಮವಾಗಿ ಆಡಿದರು. ಬ್ಯಾಟಿಂಗ್ ಮಾಡಲು ಬಂದಾಗ, ಎರಡನೇ ಅಥವಾ ಮೂರನೇ ಎಸೆತದಲ್ಲಿ ತಮ್ಮ ಫೂಟ್ ಅನ್ನು ಬಳಸಿ ಬೌಂಡರಿ ಬಾರಿಸುತ್ತಾರೆ. ಅದು ಅವರಿಗೆ ಮುಕ್ತ ಭಾವನೆ ಮೂಡಿಸುತ್ತದೆ ಮತ್ತು ನಂತರ ಅವರು ಬಯಸಿದ ರೀತಿಯಲ್ಲಿ ಆಡಲು ಅವಕಾಶ ನೀಡುತ್ತದೆ. ಆರಂಭದಲ್ಲಿ ಸ್ವಲ್ಪ ಸಮಯ ನೀಡಿ ಬಳಿಕ ಉತ್ತಮವಾಗಿ ಆಡಿದರು. ಬೌಲರ್‌ಗಳು ದಣಿದ ನಂತರ, ಅವರು ಪಿಚ್‌ನಿಂದ ಕೆಳಗಿಳಿದು ನಿಜವಾಗಿಯೂ ದಾಳಿ ಮಾಡಲು ಪ್ರಾರಂಭಿಸುತ್ತಾರೆ. ದೊಡ್ಡ ಹೊಡೆತಗಳು, ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಹೊಡೆಯುತ್ತಾರೆ' ಎಂದು ಗವಾಸ್ಕರ್ ಹೇಳಿದರು.
ಪಂತ್ ತಮ್ಮ ಇನಿಂಗ್ಸ್‌ನ ಆರಂಭದಲ್ಲಿ ತನಗಾಗಿ ಸಮಯ ನೀಡಿದ್ದರಿಂದ ನಂತರದಲ್ಲಿ ಆಕ್ರಮಣಕಾರಿಯಾಗಿ ಆಡಲು ಸಾಧ್ಯವಾಯಿತು ಎಂದು ಗವಾಸ್ಕರ್ ಗಮನಸೆಳೆದರು.
'ಪಂತ್ ಅಗಾಧ ಪ್ರತಿಭೆಯನ್ನು ಹೊಂದಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಶತಕ ಗಳಿಸಿದ್ದನ್ನು ನಾನು ನೋಡಿದ್ದೇನೆ ಮತ್ತು ಅದು ನಿಜವಾಗಿಯೂ ಅದ್ಭುತವಾಗಿತ್ತು. ಮೊದಲಿಗೆ ರಕ್ಷಣಾತ್ಮಕ ಆಟವಾಡಿ ನಂತರ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಇದು ಒಳ್ಳೆಯ ವಿಧಾನ' ಎಂದು ಅವರು ಹೇಳಿದರು.
Advertisement