
ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಟೀಂ ಇಂಡಿಯಾದ ನಾಯಕ ಶುಭಮನ್ ಗಿಲ್ ಅಜೇಯ ಶತಕ ಬಾರಿಸುವ ತಂಡವನ್ನು ಮುನ್ನಡೆಸಿದರು. ಹೆಡಿಂಗ್ಲಿಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತು. ಗಿಲ್ ಅಜೇಯ 127 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್‌ಗಳನ್ನು ಪೂರೈಸಿದರು. ವಿರಾಟ್ ಕೊಹ್ಲಿ ನಂತರ ನಾಯಕನಾಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಈ ಮೈಲಿಗಲ್ಲು ಸಾಧಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 25 ವರ್ಷದ ಗಿಲ್ ನಾಯಕನಾಗಿ ಚೊಚ್ಚಲ ಇನಿಂಗ್ಸ್‌ನಲ್ಲಿಯೇ ಶತಕ ಗಳಿಸಿದ 23ನೇ ಆಟಗಾರ ಮತ್ತು ಹರ್ಬಿ ಟೇಲರ್, ಅಲಸ್ಟೇರ್ ಕುಕ್ ಮತ್ತು ಸ್ಟೀವನ್ ಸ್ಮಿತ್ ನಂತರ ನಾಲ್ಕನೇ ಕಿರಿಯ ಆಟಗಾರರಾದರು.
ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ, ಡ್ರೆಸ್ ಕೋಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿಯಿಂದ ಶಿಸ್ತು ಕ್ರಮವನ್ನು ಎದುರಿಸುವ ಸಾಧ್ಯತೆ ಇದೆ. ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನ ಗಿಲ್ ಕಪ್ಪು ಸಾಕ್ಸ್ ಧರಿಸಿರುವುದು ಕಂಡುಬಂದಿದೆ. ಐಸಿಸಿಯ ಆಟಗಾರರ ಉಡುಪು ಮತ್ತು ಸಲಕರಣೆಗಳ ನಿಯಮಗಳ ಪ್ರಕಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿ, ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್ ಧರಿಸಬೇಕು.
ಕಪ್ಪು ಬಣ್ಣದ ಸಾಕ್ಸ್ ಧರಿಸಿದ್ದ ಗಿಲ್ ಅವರಿಗೆ ದಂಡ ವಿಧಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಗಿಲ್ ಮತ್ತು ಉಪನಾಯಕ ರಿಷಭ್ ಪಂತ್ (65*) ಇನ್ನೂ ಕ್ರೀಸ್‌ನಲ್ಲಿರುವ ಕಾರಣ, ಭಾರತವು 2ನೇ ದಿನವೂ ಉತ್ತಮ ರನ್ ಕಲೆಹಾಕುವ ನಿರೀಕ್ಷೆಯಿದೆ. ಇನ್ನು ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್‌ಗಳ ಮೈಲಿಗಲ್ಲನ್ನು ದಾಟಿದರೆ, ಪಂತ್ 3,000 ರನ್‌ಗಳನ್ನು ಪೂರೈಸಿದ್ದಾರೆ.
ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 43 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಬ್ರೈಡನ್ ಕಾರ್ಸ್ 70 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತವು ಈ ಬಾರಿ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 359 ರನ್ ಕಲೆಹಾಕಿದ್ದು, 2022ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭಿಕ ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತ್ತು.
Advertisement