
ಬಿಸಿಸಿಐ ಮತ್ತು ಈಗ ರದ್ದಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳ (ಕೆಟಿಕೆ) ನಡುವಿನ ವಿವಾದ ಪ್ರತಿದಿನಲವೂ ಹೊಸ ಸುದ್ದಿಗಳನ್ನು ಸೃಷ್ಟಿಸುತ್ತಿದೆ. ಕೆಟಿಕೆ 2011ರಲ್ಲಿ ಐಪಿಎಲ್‌ನ ಭಾಗವಾಗಿತ್ತು. ಆಗ ಆಡಿದ 14 ಪಂದ್ಯಗಳನ್ನು ಆಡಿದರು ಮತ್ತು ಕೇವಲ ಆರು ಪಂದ್ಯಗಳನ್ನು ಗೆದ್ದರು.
ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಸಿಸಿಐ ಕೇವಲ ಒಂದು ಆವೃತ್ತಿಯನಂತರ ಫ್ರಾಂಚೈಸಿಯನ್ನು ವಜಾಗೊಳಿಸಿತು. ಆದಾಗ್ಯೂ, ಕಳೆದ ವಾರ ಬಾಂಬೆ ಹೈಕೋರ್ಟ್, ಕೆಟಿಕೆಗೆ 538 ಕೋಟಿ ರೂ. ಪಾವತಿಸುವಂತೆ ಬಿಸಿಸಿಐಗೆ ಆದೇಶಿಸಿತು. ಈ ಸುದ್ದಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ ನಂತರ, ಇದೀಗ ಮಲಯಾಳಂ ಪತ್ರಿಕೆ ಮಾತೃಭೂಮಿಯ ಮತ್ತೊಂದು ವರದಿ ಬೆಳಕಿಗೆ ಬಂದಿದೆ. ವಿವಿಎಸ್ ಲಕ್ಷ್ಮಣ್, ರವೀಂದ್ರ ಜಡೇಜಾ, ಸ್ಟೀವ್ ಸ್ಮಿತ್‌ನಂತಹ ಅನೇಕ ಆಟಗಾರರಿಗೆ ಕೇರಳ ಮೂಲದ ಫ್ರಾಂಚೈಸಿಯಿಂದ ಇನ್ನೂ ಪೂರ್ಣ ಮತ್ತು ಅಂತಿಮ ಸಂಬಳ ಲಭ್ಯವಾಗಿಲ್ಲ ಎಂದು ಬಹಿರಂಗಪಡಿಸಿದೆ.
ವರದಿ ಪ್ರಕಾರ, ಕೆಟಿಕೆ ಆಟಗಾರರಿಗೆ ಅವರ ಸಂಬಳದ ಮೊದಲ ಎರಡು ಕಂತುಗಳನ್ನು ಮಾತ್ರ ಪಾವತಿಸಿದೆ. ಇನ್ನೂ ಅವರ ಮೂರನೇ ಕಂತು ಪಾವತಿಸಿಲ್ಲ, ಇದು ಅವರ ಸಂಬಳದ ಶೇ 35ರಷ್ಟಾಗಿದೆ.
'ಕೊಚ್ಚಿ ಫ್ರಾಂಚೈಸಿಯ ನಾಯಕತ್ವ ವಹಿಸಿದ್ದ ಶ್ರೀಲಂಕಾದ ದಂತಕಥೆ ಮಹೇಲ ಜಯವರ್ಧನೆ, ತಂಡದ ಅತ್ಯಂತ ದುಬಾರಿ ₹6.80 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು. ಬಡ್ಡಿ ಹೊರತುಪಡಿಸಿ, ಇನ್ನೂ ₹ 2 ಕೋಟಿಗೂ ಹೆಚ್ಚು ಪಾವತಿಸಬೇಕಿದೆ. ₹2.15 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದ ಸದ್ಯ ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರ ಇನ್ನೂ ₹75 ಲಕ್ಷ ಬಾಕಿ ಉಳಿಸಿಕೊಂಡಿದೆ' ಎಂದು ವರದಿಯಾಗಿದೆ.
'ಭಾರತದ ಮಾಜಿ ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್, ಗುಜರಾತ್ ಟೈಟಾನ್ಸ್ ಸಹಾಯಕ ಕೋಚ್ ಪಾರ್ಥಿವ್ ಪಟೇಲ್, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತು ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಸೇರಿದಂತೆ ಇತರ ಹಲವರಿಗೆ ಸಂಬಳ ಪಾವತಿಸಿಲ್ಲ. ಕೇರಳದ ಸ್ಥಳೀಯ ಆಟಗಾರರಾದ ಎಸ್ ಶ್ರೀಶಾಂತ್, ರೈಫಿ ವಿನ್ಸೆಂಟ್, ಪ್ರಶಾಂತ್ ಪದ್ಮನಾಭನ್ ಮತ್ತು ಪ್ರಶಾಂತ್ ಪರಮೇಶ್ವರನ್ ಅವರ ವೇತನವನ್ನು ಕೂಡ ಬಾಕಿ ಉಳಿದಿದೆ' ಎಂದು ಹೇಳಲಾಗಿದೆ.
ಮಧ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್, ಈಗ ರದ್ದಾಗಿರುವ 'ಕೊಚ್ಚಿ ಟಸ್ಕರ್ಸ್ ಕೇರಳ' ಐಪಿಎಲ್ ಫ್ರಾಂಚೈಸಿಗೆ ₹538 ಕೋಟಿ ಪಾವತಿಸುವಂತೆ ಸೂಚಿಸಿದೆ.
2010ರ ಐಪಿಎಲ್ ಆವೃತ್ತಿಯಲ್ಲಿ ಭಾಗವಹಿಸಿದ್ದ ಕೊಚ್ಚಿ ಟಸ್ಕರ್ಸ್ ತಂಡವನ್ನು ಫ್ರಾಂಚೈಸಿ ಒಪ್ಪಂದ ಉಲ್ಲಂಘನೆಯ ಆರೋಪದ ಮೇಲೆ ಸೆಪ್ಟೆಂಬರ್ 2011ರಲ್ಲಿ ಬಿಸಿಸಿಐ ವಜಾಗೊಳಿಸಿತ್ತು. BCCI ವಿರುದ್ಧ 2010ರಲ್ಲಿ ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಕೆಸಿಪಿಎಲ್) ಮತ್ತು ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್‌ಎಸ್‌ಡಬ್ಲ್ಯು) ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದವು.
2015ರಲ್ಲಿ ಕೆಸಿಪಿಎಲ್‌ಗೆ 384.8 ಕೋಟಿ ರೂ. ಮತ್ತು ಆರ್‌ಎಸ್‌ಡಬ್ಲ್ಯುಗೆ 153.3 ಕೋಟಿ ರೂ.ಗಳನ್ನು ಪಾವತಿಸಲು ನ್ಯಾಯಾಲಯ ಸೂಚಿಸಿತು. ನ್ಯಾಯಮಂಡಳಿಯ ತೀರ್ಪನ್ನು ಬಿಸಿಸಿಐ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
Advertisement