
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡಿದಾಗಲೆಲ್ಲಾ ಒಂದು ವಿಶೇಷ ಸಂಭ್ರಮಾಚರಣೆ ಇದ್ದೇ ಇರುತ್ತದೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಮತ್ತು ಭಾರತ ನಡುವಿನ ಲೀಡ್ಸ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಎರಡು ಇನಿಂಗ್ಸ್‌ಗಳಲ್ಲಿ ಭರ್ಜರಿ ಅವಳಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ ನಂತರ ಪಲ್ಟಿ ಹೊಡೆದು ಸಂಭ್ರಮಿಸಿದ ಪಂತ್ ಅವರು ಬಹುತೇಕರ ಗಮನ ಸೆಳೆದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ ಬಳಿಕ ಆ ಸಂಭ್ರಮಾಚರಣೆ ಮಾಡದಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು.
ಎರಡನೇ ಬಾರಿ ಶತಕ ಬಾರಿಸಿದಾಗ ಪಂತ್ ಅವರು ಮೊದಲ ಬಾರಿಯ ಸಂಭ್ರಮಾಚರಣೆಯನ್ನು ಏಕೆ ಮಾಡಲಿಲ್ಲ? ಎಂಬ ಪ್ರಶ್ನೆ ಕಾಡುತ್ತಿದೆ. ಭಾರತ ಪರ ಎರಡನೇ ಇನಿಂಗ್ಸ್‌ನಲ್ಲಿ, ಕೆಎಲ್ ರಾಹುಲ್ ಅವರೊಂದಿಗೆ ಪಂತ್ 195 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದರು. ಆದಾಗ್ಯೂ, ಈ ಬಾರಿ ಪಂತ್ ಅವರು ಪಲ್ಟಿ ಹೊಡೆದು ಸಂಭ್ರಮಿಸಲಿಲ್ಲ. ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡ ಪಂತ್ ಅವರಿಗೆ ಸನ್ನೆ ಮಾಡುವ ಮೂಲಕ ಪಲ್ಟಿ ಹೊಡೆಯುವಂತೆ ಹೇಳಿದರೂ, ಪ್ರಯೋಜನವಾಗಲಿಲ್ಲ.
ಪಂತ್ ತಮ್ಮ ಸಂಭ್ರಮಾಚರಣೆಯನ್ನು ಏಕೆ ಮಾಡಲಿಲ್ಲ ಎಂಬುದಕ್ಕೆ ಉತ್ತರ ಸಿಕ್ಕಿದೆ. ಕ್ರಿಕ್‌ಬ್ಲಾಗರ್ ಪ್ರಕಾರ, ಗೌತಮ್ ಗಂಭೀರ್ ಅವರೇ ಇದಕ್ಕೆ ಕಾರಣ ಎನ್ನಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಂತ್ ಅವರು ಮತ್ತೆ ಪಲ್ಟಿ ಹೊಡೆಯದಂತೆ ಭಾರತದ ಮುಖ್ಯ ಸ್ಪಷ್ಟ ಸಂದೇಶ ನೀಡಿದ್ದರು. 'ತಂಡದ ಯಾರೋ ಒಬ್ಬರು ಪಲ್ಟಿ ಹೊಡೆಯದಂತೆ ಪಂತ್ ಅವರಿಗೆ ಸೂಚಿಸಿದರು. ಇಲ್ಲದಿದ್ದರೆ, ಪಂತ್ ಅವರು ಪಲ್ಟಿ ಹೊಡೆದೇ ಶತಕವನ್ನು ಸಂಭ್ರಮಿಸುತ್ತಿದ್ದರು' ಎಂದು ಮೂಲಗಳು ತಿಳಿಸಿವೆ. ಈ ರೀತಿಯ ಸೂಚನೆ ನೀಡಲು ಗಂಭೀರ್ ಅವರಿಗೆ ಮಾತ್ರ ಸಾಧ್ಯ. ಬೇರೆ ಯಾರೂ ಹೀಗೆ ಮಾಡಿರುವುದಿಲ್ಲ ಎಂದು ವರದಿ ಹೇಳಿದೆ.
ಐಪಿಎಲ್ 2025ರ ಲಕ್ನೋ ಸೂಪರ್ ಜೈಂಟ್ಸ್ (LSG) ಪರವಾಗಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಂತ್ ಶತಕ ಗಳಿಸಿ ವಿಶಿಷ್ಟ ಆಚರಣೆಯನ್ನು ಪ್ರದರ್ಶಿಸಿದರು. ಐಪಿಎಲ್ ಆರಂಭದಿಂದಲೂ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಅವರು ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿ ಅಭಿಯಾನ ಮುಗಿಸಿದರು. ಪಂತ್ ಆ ಆವೃತ್ತಿಯಲ್ಲಿ ಆಡಿದ 13 ಪಂದ್ಯಗಳಲ್ಲಿ 13.72 ರ ಸರಾಸರಿಯಲ್ಲಿ ಕೇವಲ 151 ರನ್ ಗಳಿಸಿದರು. ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ, ಪಂತ್ 61 ಎಸೆತಗಳಲ್ಲಿ 118 ರನ್ ಗಳಿಸುವ ಮೂಲಕ ಭರ್ಜರಿ ಆಟವಾಡಿದರು.
Advertisement