
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳಿಗೆ ವಿಶ್ವದ ಅತ್ತುತ್ತಮ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿಕೊಂಡಿರುವುದು ಹಲವರಿಗೆ ಆಶ್ಚರ್ಯ ಉಂಟುಮಾಡಿದೆ. ಟೆಸ್ಟ್ ಸರಣಿ ಗೆಲ್ಲಲು ಭಾರತ ತಂಡಕ್ಕೆ ಅತ್ಯಂತ ಕಠಿಣ ಸ್ಥಳವಾದ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಿಗೆ ಮಾತ್ರ ಬುಮ್ರಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಮುಂಬೈ ಇಂಡಿಯನ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಬಹುತೇಕ ಎಲ್ಲ ಪಂದ್ಯಗಳಲ್ಲಿ ಆಡಿದ್ದ ಬುಮ್ರಾ ಅವರಿಗೆ ಇಂಗ್ಲೆಂಡ್ ವಿರುದ್ಧ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಈಗಾಗಲೇ ಈ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ. ಬುಮ್ರಾ ಅವರ ಮೇಲಿನ ಕೆಲಸದ ಹೊರೆಯನ್ನು ನಿರ್ವಹಿಸಲು ಕಡಿಮೆ ಪ್ರಾಮುಖ್ಯತೆ ಹೊಂದಿದ್ದ ಪಂದ್ಯಗಳಿಂದ ಅವರನ್ನು ದೂರ ಇಟ್ಟಿರಲಿಲ್ಲ ಈಗ ಅವರನ್ನು ದೂರ ಇಡುತ್ತಿರುವುದಕ್ಕೆ ಹಲವರು ಟೀಕಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, 5 ಟೆಸ್ಟ್ ಪ್ರವಾಸದಲ್ಲಿ ಬುಮ್ರಾಗೆ ಕೇವಲ ಮೂರು ಪಂದ್ಯಗಳನ್ನು ನೀಡುವ ಭಾರತ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಟೀಕಿಸಿದ್ದಾರೆ.
'ಅವರು ಬಹುಶಃ ಎಲ್ಲ ಸ್ವರೂಪಗಳಲ್ಲಿ ವಿಶ್ವದ ಅಗ್ರ ಬೌಲರ್ ಆಗಿರಬಹುದು. ಆದ್ದರಿಂದ, ಅವರಿಗೆ ವಿಶ್ರಾಂತಿ ನೀಡುವ ಮಾರ್ಗವನ್ನು ನಿರ್ಧರಿಸುವುದು ತುಂಬಾ ಕಷ್ಟ' ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
'ಆದರೆ ನನ್ನ ಅಭಿಪ್ರಾಯದಲ್ಲಿ, ಕ್ರಿಕೆಟ್ ಆಟದಲ್ಲಿ ಟೆಸ್ಟ್ ಕ್ರಿಕೆಟ್ ಅತ್ಯುನ್ನತವಾಗಿದೆ ಮತ್ತು ಈ ನಿರ್ದಿಷ್ಟ ಸರಣಿಯಲ್ಲಿ ಬುಮ್ರಾ ಅವರನ್ನು ಐದು ಪಂದ್ಯಗಳಲ್ಲಿಯೂ ಆಡಿಸುವುದು ಸಾಕಷ್ಟು ಮಹತ್ವದ್ದಾಗಿತ್ತು. ಅವರನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಮತ್ತು ಸವಾಲು ಹಾಕಲು ಇದು ಸೂಕ್ತ ಅವಕಾಶವಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಸ್ಟೇಯ್ನ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಡಿವಿಲಿಯರ್ಸ್, ಬುಮ್ರಾ ಅವರಿಗೆ ಕಡಿಮೆ ಪ್ರಾಮುಖ್ಯತೆ ಹೊಂದಿರುವ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ವಿಶ್ರಾಂತಿ ನೀಡಬೇಕಿತ್ತು ಎಂದು ಹೇಳಿದರು.
'ನಾವು ಡೇಲ್ (ಸ್ಟೇಯ್ನ್) ಜೊತೆ ಹಾಗೆ ಮಾಡುತ್ತಿದ್ದೆವು. ಅವರಿಗೆ ಕಡಿಮೆ ಪ್ರಾಮುಖ್ಯತೆಯ ಟಿ20 ಮತ್ತು ಏಕದಿನ ಸರಣಿಗಳಲ್ಲಿ ವಿಶ್ರಾಂತಿ ನೀಡಿ ಮತ್ತು ತವರಿನಿಂದ ಹೊರಗಿನ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತ ವಿರುದ್ಧದ ದೊಡ್ಡ ಟೆಸ್ಟ್ ಸರಣಿಗೆ ಸಿದ್ಧಪಡಿಸುತ್ತಿದ್ದೆವು. ಸ್ವಲ್ಪ ಮಟ್ಟಿಗೆ ನ್ಯೂಜಿಲೆಂಡ್ ವಿರುದ್ಧವೂ, ಆ ಸಮಯದಲ್ಲಿ ಶ್ರೇಯಾಂಕವನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು' ಎಂದು ಅವರು ವಿವರಿಸಿದರು.
ತಂಡವು ಅಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ಪ್ರಶ್ನಿಸುತ್ತಾ, 'ಆದ್ದರಿಂದ, ಇದು ತಪ್ಪು ನಿರ್ವಹಣೆಯೋ ಅಥವಾ ಬಹುಶಃ ಅವರು ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡಿದ್ದರಿಂದಲೋ ನನಗೆ ತಿಳಿದಿಲ್ಲ. ಆದರೆ, ಚೇತರಿಕೆಯ ನಂತರ ಐಪಿಎಲ್ ಅನ್ನು ಅಭ್ಯಾಸವಾಗಿ ಬಳಸಿರಬಹುದು' ಎಂದು ಅವರು ಹೇಳಿದರು.
ಬುಮ್ರಾ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವುದರ ಹಿಂದೆ ಸರಿಯಾದ ಕಾರಣಗಳಿರಬಹುದು. ಬಹುಶಃ ವೈದ್ಯಕೀಯ ಸಲಹೆಯ ಕಾರಣವಿರಬಹುದು. ಶಸ್ತ್ರಚಿಕಿತ್ಸಕರ ಬಳಿಗೆ ಹೋಗಿದ್ದಾಗ, ಅವರು 'ನೀವು ಐದು ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ' ಎಂದು ತಿಳಿಸಿರಬಹುದು. ಆದ್ದರಿಂದ, ನೀವು ಅದನ್ನು ಗೌರವಿಸಬೇಕು ಮತ್ತು ದಿನದ ಕೊನೆಯಲ್ಲಿ, ಅವರನ್ನು ಚೆನ್ನಾಗಿ ನಿರ್ವಹಿಸುವುದು ಟೀಂ ಇಂಡಿಯಾದ ಜವಾಬ್ದಾರಿಯಾಗಿದೆ' ಎಂದು ಅವರು ಹೇಳಿದರು.
ಭಾರತ ಆಡುತ್ತಿರುವಂತಹ ಐದು ಟೆಸ್ಟ್ ಸರಣಿಯು ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಮಾತ್ರ ಇದಕ್ಕಿಂತ ದೊಡ್ಡ ಸಂದರ್ಭವಾಗಿರಬಹುದು ಎಂದರು.
Advertisement