
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ನಾಲ್ಕನೇ ಸೋಲು ಕಂಡಿದ್ದು, ಇಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಹೀನಾಯ ಸೋಲು ಕಂಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಮಹಿಳಾ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 147ರನ್ ಕಲೆ ಹಾಕಿತು. 148ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 15.3 ಓವರ್ ನಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ 9 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.
ಡೆಲ್ಲಿ ಪರ ಶಫಾಲಿ ವರ್ಮಾ ಅಜೇಯ 80 ರನ್ ಗಳಿಸಿ ಗೆಲುವಿನ ರೂವಾರಿಯಾದರೆ ಅವರಿಗೆ ಉತ್ತಮ ಸಾಥ್ ನೀಡಿದ ಜೆಸ್ಸ್ ಜೋನಾಸ್ಸೆನ್ ಅಜೇಯ 61ರನ್ ಗಳಿಸಿದರು. ಆರ್ ಸಿಬಿ ಪರ ರೇಣುಕಾ ಸಿಂಗ್ ಒಂದು ವಿಕೆಟ್ ಪಡೆದರು.
ಆರ್ ಸಿಬಿ ನಿಧಾನಗತಿ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿಗೆ ನಿಧಾನಗತಿಯ ಬ್ಯಾಟಿಂಗ್ ಮುಳುವಾಯಿತು. ಟಿ20 ಮಾದರಿ ಕ್ರಿಕೆಟ್ ಗೆ ಬೇಕಾದ ವೇಗದ ಬ್ಯಾಟಿಂಗ್ ಇತ್ತೀಚಿನ ದಿನಗಳಲ್ಲಿ ಆರ್ ಸಿಬಿ ಮಹಿಳಾ ತಂಡದಿಂದ ಮೂಡಿ ಬರುತ್ತಿಲ್ಲ. ಎಲ್ಲಿಸ್ ಪೆರ್ರಿ ಅವರನ್ನು ಹೊರತು ಪಡಿಸಿದರೆ ನಾಯಕಿ ಸ್ಮೃತಿ ಮಂದನ ಕೂಡ ವೇಗವಾಗಿ ಬ್ಯಾಟಿಂಗ್ ಮಾಡಲು ಹೆಣಗಾಡುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಕೇವಲ 47 ಎಸೆತಗಳಲ್ಲಿ 60 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ರಘ್ವಿ ಬಿಷ್ತ್ 32 ಎಸೆತಗಳಲ್ಲಿ 33ರನ್ ಕಲೆಹಾಕಿದರು.
ಎಲಿಮಿನೇಟರ್ ಹಂತಕ್ಕೆ Delhi Capitals ಲಗ್ಗೆ!
ಈ ಪಂದ್ಯದ ಗೆಲುವಿನೊಂದಿಗೆ ಟೇಬಲ್ ಟಾಪರ್ ಆಗಿರುವ ಡೆಲ್ಲಿ ಎಲಿಮಿನೇಟರ್ ಹಂತಕ್ಕೆ ಲಗ್ಗೆ ಇಟ್ಟಿದೆ. ತಾನಾಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಡೆಲ್ಲಿ ಗೆಲುವು ಸಾಧಿಸಿದ್ದು, ಒಟ್ಟು 10 ಅಂಕ ಮತ್ತು +0.482 ನೆಟ್ ರನ್ ರೇಟ್ ನೊಂದಿಗೆ ಎಲಿಮಿನೇಟರ್ ಹಂತಕ್ಕೆ ಅರ್ಹತೆ ಪಡೆದಿದೆ.
Advertisement