
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ ಎಂದರೆ ತಪ್ಪಾಗಲಾರದು. ಕೊಹ್ಲಿ ಇದೀಗ ತಮ್ಮ ವೃತ್ತಿ ಜೀವನದ 300ನೇ ಏಕದಿನ ಪಂದ್ಯವನ್ನು ಆಡುತ್ತಿದ್ದು, ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಹಿರಿಯ ಸಹೋದರ ವಿಕಾಸ್ ಕೊಹ್ಲಿ ಭಾನುವಾರ ದುಬೈಗೆ ಆಗಮಿಸಲಿದ್ದಾರೆ. ಭಾನುವಾರ ದುಬೈನಲ್ಲಿ ಕಿವೀಸ್ ವಿರುದ್ಧದ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಬ್ಯಾಟಿಂಗ್ ಮಾಂತ್ರಿಕ ತಮ್ಮ 300ನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಈ ಮೂಲಕ ಈ ಮೈಲಿಗಲ್ಲನ್ನು ತಲುಪಿದ 7ನೇ ಭಾರತೀಯ ತಾರೆಯಾಗಲಿದ್ದಾರೆ.
'ವಿರಾಟ್ ಕೊಹ್ಲಿ ಅವರ 300ನೇ ಏಕದಿನ ಪಂದ್ಯಕ್ಕಾಗಿ ಅನುಷ್ಕಾ ಶರ್ಮಾ ಮತ್ತು ವಿಕಾಸ್ ಕೊಹ್ಲಿ (ವಿರಾಟ್ ಕೊಹ್ಲಿ ಅವರ ಹಿರಿಯ ಸಹೋದರ) ಭಾನುವಾರ ದುಬೈ ತಲುಪಲಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ವ್ಯಾಪಕ ಚರ್ಚೆ ಉಂಟಾಗಿತ್ತು. ಆದರೆ, ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಬಾರಿಸಿ ನಾಟೌಟ್ ಆಗಿ ಉಳಿಯುವ ಮೂಲಕ ಕೊಹ್ಲಿ ಎಲ್ಲರಿಗೂ ಉತ್ತರ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸಮಯದಲ್ಲಿ ಕೊಹ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ ಎಂದು ವ್ಯಾಪಕ ಸುದ್ದಿಯಾಗಿತ್ತು. ಬಳಿಕ ಇಂಗ್ಲೆಂಡ್ ವಿರುದ್ಧ ನಡೆದ ಮೂರು ಏಕದಿನ ಪಂದ್ಯಗಳ ಸಮಯದಲ್ಲಿಯೂ ಟೀಕಾಕಾರರ ಬಾಯಿ ಮುಚ್ಚಿಸಲು ಸಾಧ್ಯವಾಗಿರಲಿಲ್ಲ.
ಬಾಂಗ್ಲಾದೇಶದ ವಿರುದ್ಧದ ಭಾರತದ ಚಾಂಪಿಯನ್ಸ್ ಟ್ರೋಫಿ ಆರಂಭಿಕ ಪಂದ್ಯದಲ್ಲಿಯೂ ಕೊಹ್ಲಿ 38 ಎಸೆತಗಳಲ್ಲಿ ಕೇವಲ 22 ರನ್ ಗಳಿಸಿ ಔಟ್ ಆಗಿದ್ದರು. ಬಳಿಕ ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದರು.
ಇದೇ ಪಂದ್ಯದಲ್ಲಿ ಕೊಹ್ಲಿ 51ನೇ ಏಕದಿನ ಶತಕದ ದಾಖಲೆ ಬರೆದರು ಮತ್ತು ಏಕದಿನ ಮಾದರಿಯಲ್ಲಿ ವೇಗವಾಗಿ 14,000 ರನ್ ಗಳಿಸಿದವರ ಸಾಲಿಗೆ ಸೇರಿದರು. ಸದ್ಯ ವಿರಾಟ್ ಕೊಹ್ಲಿ 299 ಏಕದಿನ ಪಂದ್ಯಗಳಲ್ಲಿ 58.20ರ ಸರಾಸರಿಯಲ್ಲಿ 14,085 ರನ್ ಗಳಿಸಿದ್ದಾರೆ. 51 ಶತಕಗಳು ಮತ್ತು 73 ಅರ್ಧಶತಕಗಳೊಂದಿಗೆ, 193 ಅವರ ಅತ್ಯುತ್ತಮ ಸ್ಕೋರ್ ಆಗಿದೆ.
Advertisement