
ಭಾರತ-ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಟೀಂ ಇಂಡಿಯಾದ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಬೌಲ್ಡ್ ಮಾಡಿ ಗೇಲಿ ಮಾಡಿದ ಪಾಕಿಸ್ತಾನದ ಬೌಲರ್ ಅಬ್ರಾರ್ ಅಹ್ಮದ್ ಟೀಕೆಗೆ ಗುರಿಯಾಗಿದ್ದರು. ಇದೀಗ ಅಬ್ರಾರ್ ಅಹ್ಮದ್ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದ್ದಾರೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯವು ವಿರಾಟ್ ಕೊಹ್ಲಿ ಅವರ 300 ನೇ ಏಕದಿನ ಪಂದ್ಯವಾಗಲಿದ್ದು, ಈ ವೇಳೆ 'ಕಿಂಗ್ ಕೊಹ್ಲಿ' ಅವರನ್ನು ಕುರಿತು ಅಬ್ರಾರ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
'ನನ್ನ ಬಾಲ್ಯದ ಹೀರೋ ಆಗಿರುವ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ ಅವರು ನನಗೆ ತೋರಿಸಿದ ಮೆಚ್ಚುಗೆಗೆ ನಾನು ಕೃತಜ್ಞನಾಗಿದ್ದೇನೆ. ಒಬ್ಬ ಕ್ರಿಕೆಟಿಗನಾಗಿ ಅವರ ಅಸಾಧಾರಣ ಕೌಶಲ್ಯ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿ ಅವರ ನಮ್ರತೆ ಮತ್ತು ಪಾತ್ರವು ಅತ್ಯುತ್ತಮವಾಗಿದೆ. ಮೈದಾನದ ಒಳಗೆ ಮತ್ತು ಹೊರಗೆ ಅವರು ನಿಜವಾದ ಸ್ಫೂರ್ತಿ!' ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅಬ್ರಾರ್ ಬರೆದಿದ್ದಾರೆ. ವಿರಾಟ್ ಕೊಹ್ಲಿ ಅವರೊಂದಿಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ -ಪಾಕಿಸ್ತಾನ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಅವರು ಏಕದಿನ ಮಾದರಿಯಲ್ಲಿ ತಮ್ಮ 51ನೇ ಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು. ಪಾಕಿಸ್ತಾನದ ಪರ ಅಬ್ರಾರ್ ಅತ್ಯುತ್ತಮ ಸ್ಪೆಲ್ ಅನ್ನು ಮಾಡಿದರು. ಅವರು ಕೇವಲ 28 ರನ್ ನೀಡಿ ಒಂದು ವಿಕೆಟ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.
ಭಾನುವಾರ ದುಬೈನಲ್ಲಿ ಕಿವೀಸ್ ವಿರುದ್ಧದ ಅಂತಿಮ ಗುಂಪು ಹಂತದ ಪಂದ್ಯ ನಡೆಯಲಿದ್ದು, ಇದು ವಿರಾಟ್ ಕೊಹ್ಲಿ ಅವರ 300ನೇ ಏಕದಿಂದ ಪಂದ್ಯವಾಗಿರಲಿದೆ. ಕೊಹ್ಲಿ ಈ ಸಾಧನೆ ಮಾಡಿದ ಏಳನೇ ಭಾರತೀಯ ತಾರೆಯಾಗುತ್ತಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬಂದಿದ್ದವು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯ ನಂತರ ವಿರಾಟ್ ಮತ್ತು ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಬಾಂಗ್ಲಾದೇಶದ ವಿರುದ್ಧದ ಭಾರತದ ಚಾಂಪಿಯನ್ಸ್ ಟ್ರೋಫಿ ಆರಂಭಿಕ ಪಂದ್ಯದಲ್ಲಿ 38 ಎಸೆತಗಳಲ್ಲಿ 22 ರನ್ ಗಳಿಸಿ ವಿರಾಟ್ ಕೊಹ್ಲಿ ಔಟ್ ಆಗಿದ್ದರು. ಬಳಿಕ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿನಿ ಔಟ್ ಆಗದೆ ಉಳಿದಿದ್ದರು.
Advertisement