
ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿನ ಭಾರತ ತಂಡದ ಹೀನಾಯ ಪ್ರದರ್ಶನದ ಬಳಿಕ ಟೆಸ್ಟ್ ಕನ್ನಡಿಗ ಆಟಗಾರನ ಭಾರತ ತಂಡ ಸೇರ್ಪಡೆ ಒತ್ತಡ ಹೆಚ್ಚಾಗಿದೆ.
ಹೌದು.. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ತೋರಿತ್ತು. ಈ ಸರಣಿ ಬೆನ್ನಲ್ಲೇ ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಮೇಜರ್ ಸರ್ಜರಿಯ ಅವಶ್ಯಕತೆ ಇದ್ದು, ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರ ಅವಶ್ಯಕತೆ ಇದೆ ಎಂಬ ವಾದ ಉದ್ಭವವಾಗಿತ್ತು. ಟೆಸ್ಟ್ ಸ್ಷೆಷಲಿಸ್ಟ್ ಚೇತೇಶ್ವರ ಪೂಜಾರ ಮತ್ತು ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕರುಣ್ ನಾಯರ್ ಸೇರ್ಪಡೆಗೆ ಇದೀಗ ವ್ಯಾಪಕ ಒತ್ತಡ ಬರುತ್ತಿದೆ.
ಪ್ರಸ್ತುತ ದೇಶಿಯ ಕ್ರಿಕೆಟ್ ನಲ್ಲಿ ಕರುಣ್ ನಾಯರ್ ಅಬ್ಬರಿಸುತ್ತಿದ್ದು, ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಇದೇ ಕರುಣ್ ನಾಯರ್ ಬ್ಯಾಟಿಂಗ್ ಪರಿಶ್ರಮದಿಂದ ವಿದರ್ಭ ತಂಡವು ರಣಜಿ ಟ್ರೋಫಿ ಗೆದ್ದಿದೆ. ಕೇರಳ ವಿರುದ್ಧ ಡ್ರಾ ಸಾಧಿಸಿ ಮೊದಲ ಇನ್ನಿಂಗ್ಸ್ ಮುನ್ನಡೆಯಿಂದ ಚಾಂಪಿಯನ್ ಆಗಿದೆ.
ಇದೀಗ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ವಿದರ್ಭ ಪರ ಅಭೂತಪೂರ್ವ ಪ್ರದರ್ಶನ ನೀಡಿರುವ ಕರುಣ್ ನಾಯರ್ ಮತ್ತೆ ಭಾರತ ತಂಡದ ಕದ ತಟ್ಟುತ್ತಿದ್ದಾರೆ. ಅವರು 2017ರ ಬಳಿಕ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ರಣಜಿಯಲ್ಲಿ ಕರುಣ್ ನಾಯರ್ ಅದ್ಭುತ ಪ್ರದರ್ಶನ
ರಣಜಿ ಟ್ರೋಫಿಯಲ್ಲಿ ಕರುಣ್ ನಾಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ದಾಖಲೆ ಬರೆದಿದ್ದರು. ಈ ಸೀಸನ್‌ನಲ್ಲಿ ನಾಲ್ಕನೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಅಂತೆಯೇ ರಣಜಿ ಫೈನಲ್ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಕರುಣ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8,000 ರನ್‌ಗಳನ್ನು ಪೂರ್ಣಗೊಳಿಸಿದರು. ಅಲ್ಲದೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಯರ್ ಅವರ 36 ನೇ ಅರ್ಧಶತಕವಾಗಿತ್ತು. ಅಲ್ಲದೆ ನಾಯರ್ ಈಗ 2024/25 ರಣಜಿ ಟ್ರೋಫಿ ಆವೃತ್ತಿಯಲ್ಲಿ 800 ಕ್ಕೂ ಅಧಿಕ ರನ್ ಕಲೆಹಾಕಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಇದು ಕರುಣ್ ಸಿಡಿಸಿರುವ ನಾಲ್ಕನೇ ಶತಕವಾಗಿದೆ.
ಕರುಣ್ ಪರ ಸಿಂಪಲ್ ಸುನಿ ಬ್ಯಾಟಿಂಗ್
ಇನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಕರುಣ್ ನಾಯರ್ ರನ್ನು ಆಯ್ಕೆ ಮಾಡಬೇಕು ಎಂದು ಕನ್ನಡದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಆಗ್ರಹಿಸಿದ್ದು ಈ ಕುರಿತು ಪೋಸ್ಟ್ ಮಾಡಿರುವ ಅವರು, ಈಗಲೂ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡದಿದ್ದರೆ Ranji Trophyಯಲ್ಲಿನ ಅವರ ಅದ್ಭುತ ಪ್ರದರ್ಶನಕ್ಕೆ ಅರ್ಥವೇ ಇಲ್ಲ ಎಂದು ಹೇಳಿದ್ದಾರೆ.
Advertisement